ಎನ್ಇಇಟಿ-ಪಿಜಿ ಕೌನ್ಸೆಲಿಂಗ್ ತ್ವರಿತಗೊಳಿಸುವಂತೆ ಆಗ್ರಹಿಸಿ ಸ್ಥಾನಿಕ ವೈದ್ಯರು 15 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆದಿದ್ದಾರೆ. ಪ್ರತಿಭಟನಾನಿರತ ವೈದ್ಯರ ಮೇಲೆ ಹಾಕಿದ್ದ ಎಫ್ಐಆರ್ ರದ್ದುಪಡಿಸುವ ಭರವಸೆ ನೀಡಿರುವುದರಿಂದ ಎಲ್ಲಾ ವೈದ್ಯರು ಕೆಲಸಕ್ಕೆ ಹಾಜರಾಗಿದ್ದಾರೆ.
ಮುಷ್ಕರ ಹಿಂಪಡೆದಿದ್ದೇವೆ. ಕೆಲಸಕ್ಕೆ ಹೋಗುತ್ತೇವೆ. ಕಳೆದ ರಾತ್ರಿ ಜಂಟಿ ಪೊಲೀಸ್ ಕಮಿಷನರ್ ಜೊತೆ ಸಭೆ ನಡೆಸಿದ್ದೇವೆ. ಅವರು ಎಫ್‌ಐಆರ್ ರದ್ದುಗೊಳಿಸುವಂತೆ ಸೂಚನೆ ನೀಡಿದರು.
ನೀಟ್-ಪಿಜಿಗೆ ಸಂಬಂಧಿಸಿದಂತೆ, ಜನವರಿ 6 ರ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಅನುಮತಿ ಬರಲಿದೆ ಎಂದು ನಮಗೆ ಭರವಸೆ ನೀಡಲಾಗಿದೆ ಎಂದು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ ಮನೀಷ್ ಕುಮಾರ್ ಹೇಳಿದರು.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ವೈದ್ಯರೊಂದಿಗೆ ನಡೆಸಿದ ಸಭೆಯಲ್ಲಿ ಎಫ್‌ಐಆರ್ ರದ್ದುಗೊಳಿಸುವ ಭರವಸೆ ನೀಡಿದ್ದರು. ಎನ್ಇಇಟಿ-ಪಿಜಿ ಕೌನ್ಸೆಲಿಂಗ್ ಅನ್ನು ತ್ವರಿತಗೊಳಿಸುವ ಬೇಡಿಕೆಯಂತೆ ಜನವರಿ 6 ರ ವಿಚಾರಣೆ ಮೊದಲು ಸರ್ಕಾರ ತನ್ನ ವರದಿ ಸಲ್ಲಿಸುತ್ತದೆ. ಕೌನ್ಸೆಲಿಂಗ್ ಶೀಘ್ರ ನಡೆಯುತ್ತದೆ ಎಂದು ತಿಳಿಸಿದ್ದರು.
ಆರೋಗ್ಯ ಸಚಿವರ ಭರವಸೆಯ ಬಳಿಕವೂ ವೈದ್ಯರು ಮುಷ್ಕರ ಮುಂದುವರೆಸಿದರು. ಆದರೆ ಇದೀಗ ಎಫ್ಐಆರ್ ರದ್ದು ಮತ್ತು ಕೌನ್ಸೆಲಿಂಗ್ ಆರಂಭದ ಭರವಸೆ ಸಿಕ್ಕಿರುವುದರಿಂದ ಸ್ಥಾನಿಕ ವೈದ್ಯರು ಮುಷ್ಕರ ಕೈಬಿಟ್ಟಿದ್ದಾರೆ.
ಕೌನ್ಸೆಲಿಂಗ್ ವಿಳಂಬದಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ಹೊರಹೋಗುವ 3ನೇ ವರ್ಷದ ಪಿಜಿ ವಿದ್ಯಾರ್ಥಿಗಳು ಈಗಾಗಲೇ ತೊರೆದಿದ್ದಾರೆ. ಪ್ರವೇಶಕ್ಕೆ ವಿಳಂಬವಾಗಿದ್ದು, ವೈದ್ಯರ ಕೊರತೆಯಿಂದ ಸ್ಥಾನಿಕ ವೈದ್ಯರು ವಾರಕ್ಕೆ 120 ಗಂಟೆ ಕೆಲಸ ಮಾಡುವಂತಾಗಿದೆ ಎಂದು ವರದಿಯಾಗಿದೆ.