ಉತ್ತರ ಪ್ರದೇಶ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ನಡೆಸಲು ಯಾವುದೇ ವಿಳಂಬ ಆಗುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ. ಈ ಮೂಲಕ ಕೊವಿಡ್ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ಊಹಾಪೋಹಗಳಿಗೆ ತೆರೆಬಿದ್ದಂತೆ ಆಗಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಮ್ಮನ್ನು ಭೇಟಿ ಮಾಡಿದರು. ಕೊವಿಡ್ ನಿಯಮಗಳನ್ನು ಅನುಸರಿಸಿ ಸಮಯಕ್ಕೆ ಚುನಾವಣೆ ನಡೆಸಬೇಕೆಂದು ಎಲ್ಲಾ ಪಕ್ಷದ ಮುಖಂಡರು ಹೇಳಿದ್ದಾರೆಂದು ತಿಳಿಸಿದರು.
80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತ್ತು ಕೊವಿಡ್ ಬಾಧಿತರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹೊಸ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಪ್ರಕರಣಗಳ ನಡುವೆಯೇ ಚುನಾವಣೆ ಮುಂದೂಡುವಂತೆ ಅಲಹಾಬಾದ್ ಹೈಕೋರ್ಟ್ ಮನವಿ ಮಾಡಿದ ನಂತರ ಸುಶೀಲ್ ಚಂದ್ರ ನೇತೃತ್ವದ ತಂಡ ಜನರು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಭೇಟಿ ಮಾಡಿದ ನಂತರ ಈ ಹೇಳಿಕೆಗಳು ಹೊರಬಿದ್ದಿವೆ.
ನಾವು ಎಲ್ಲಾ ಪಕ್ಷಗಳ ಅಭಿಪ್ರಾಯ, ಆತಂಕವನ್ನು ಕೇಳಿಸಿಕೊಂಡಿದ್ದೇವೆ. ಕೊವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಬೇಕೆಂಬ ಮನವಿಗಳು ಬಂದಿವೆ. ಅಷ್ಟೇ ಅಲ್ಲ ಕೊವಿಡ್ ನಿಮಯ ಉಲ್ಲಂಘಿಸಿ ರ್ಯಾಲಿ ನಡೆಸುತ್ತಿದ್ದು ಅವುಗಳಿಗೆ ನಿರ್ಬಂಧ ವಿಧಿಸುವಂತೆ ಕೇಳಿಕೊಂಡಿವೆ ಎಂದು ಹೇಳಿದರು.