ಲಾರಿಯಲ್ಲಿ ದನಗಳ ಸಾಗಣೆ ಶಂಕೆ ಮೇರೆಗೆ ವ್ಯಾಪಾರಿ ಕೆ.ಆರ್. ಮಂಜುನಾಥ್ ಮತ್ತು ಬೆಂಬಲಿಗರು ದಾಳಿ ನಡೆಸಿ ನೀಡಿದ ದೂರಿನಿಂದ ರಾಜಸ್ಥಾನದ ಜೈಸಲ್ಮೇರುನಿಂದ ಮಂಡ್ಯಕ್ಕೆ ಮೇಕೆ ಸಾಗಿಸುತ್ತಿದ್ದ ನಾಲ್ವರು ವಿನಾ ಕಾರಣ ಜೈಲು ಪಾಲಾಗಿ ತೊಂದರೆ ಅನುಭವಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಎಫ್ಐಆರ್ ನಲ್ಲಿ ದಾಖಲಿಸಿರುವಂತೆ ಭಜರಂಗದಳ ಕಾರ್ಯಕರ್ತ ತರುಣ್ ಎಂಬುವರು ಕೋಟೆ ವಾಸಿ ಕೆ.ಆರ್. ಮಂಜುನಾಥ್ ಗೆ ಫೋನ್ ಮಾಡಿ ದನಗಳ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡುತ್ತಾರೆ. ಇದರಿಂದ ಕಾರ್ಯಪ್ರವೃತ್ತಗೊಂಡ ವ್ಯಾಪಾರಿ ಮಂಜುನಾಥ್ ತನ್ನ ಬೆಂಬಲಿಗರೊಂದಿಗೆ ಲಾರಿಯನ್ನು ಗೂಳೂರು ಸಮೀಪ ತಡೆಯಲು ಪ್ರಯತ್ನಿಸಿದ್ದಾರೆ.
ಆದರೆ ಪ್ರಾಣಾಪಾಯದಿಂದ ಪಾರಾಗಲು ಚಾಲಕ ಲಾರಿಯನ್ನು ವೇಗವಾಗಿ ಓಡಿಸಿಕೊಂಡು ಹೋಗಿ ಕುಣಿಗಲ್ ತಾಲ್ಲೂಕು ಸಂತೇಮಾವತ್ತೂರು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸುತ್ತಾರೆ. ಮಂಜುನಾಥ್ ಮತ್ತು ಬೆಂಬಲಿಗರು ಕಾರಿನಲ್ಲಿ ಲಾರಿ ಬೆನ್ನಟ್ಟಿ ನಿಲ್ಲಿಸಿದ್ದ ಲಾರಿಯಲ್ಲಿ ನೋಡಲಾಗಿ ಮೇಕೆಗಳಿರುವುದು ಪತ್ತೆಯಾಗಿದೆ.
ಆಗ ವ್ಯಾಪಾರಿ ಮಂಜುನಾಥ್ ಮತ್ತು ಬೆಂಬಲಿಗರು, ಲಾರಿ ಚಾಲಕ ಮತ್ತು ಕೂಲಿ ಕಾರ್ಮಿಕರ ಮೇಲೆ ಗಲಾಟೆ ಮಾಡಿದ್ದಾರೆ. ಮೇಕೆಗಳಿಗೆ ಗಾಳಿ ಬೆಳಕು ಇಲ್ಲ, ಮೇವು ಹಾಕದೆ ಕೆಲ ಮೇಕೆಗಳು ಸತ್ತಿವೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಾಯಕ ಚಾಲಕ ಸೇರಿ ಇತರೆ ಮೂವರನ್ನು ಬಂಧಿಸಿ ಲಾರಿ ವಶಕ್ಕೆ ಪಡೆಯಲಾಗುತ್ತದೆ.
ಮೇಕೆ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸುತ್ತಾರೆ. ಲಾರಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಲಾಗುತ್ತದೆ. 12 ದಿನಗಳ ಬಳಿಕ ಲಾರಿ ಬಿಡುಗಡೆಯಾಗುತ್ತದೆ. ನಮ್ಮನ್ನು ಸುಮ್ಮನೆ ತೊಂದರೆಗೆ ಸಿಲುಕುವಂತೆ ಮಾಡಿದರು. ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾಯ್ತು ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ಲಾರಿಯಲ್ಲಿ ದನ ಸಾಗಿಸುತ್ತಿಲ್ಲವೆಂಬ ಮಾಹಿತಿ ತಿಳಿದ ಮೇಲೂ ಆ ಗುಂಪು ಲಾರಿ ಚಾಲಕ ಕಂ ಮಾಲಿಕ ಹಾಗೂ ಇತರೆ ಮೂವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿದೆ. ಹಲ್ಲೆಗೆ ಯತ್ನಿಸಿದೆ. ನೂರಾರು ಕಿಲೋ ಮೀಟರ್ ದೂರದಿಂದ ಬಂದವರಿಗೆ ಆ ಗುಂಪು ತೊಂದರೆ ನೀಡಿದೆ. ಭಜರಂಗದಳದ ಕಾರ್ಯಕರ್ತರು ಈ ರೀತಿ ಅನಗತ್ಯ ದಾಳಿ ಮಾಡುವ ಮೂಲಕ ತುಮಕೂರು ಜಿಲ್ಲೆಯ ಹೆಸರಿಗೆ ಕಳಂಕ ತರುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ.