ಬಿಜೆಪಿ ಹಾಗೂ ಜೆಡಿಎಸ್ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಮೇಕೆದಾಟು ಆರಂಭಕ್ಕೆ ಒತ್ತಾಯಿಸಿ ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಮಾಜಿ ಸಿಎ ಕುಮಾರಸ್ವಾಮಿ ಹಿರಿಯರು, ಬುದ್ದಿವಂತರು. ಅವರಿಗೆ ರಾಜಕಾರಣದಲ್ಲಿ ಅನುಭವಿದೆ. ಹೋರಾಟದ ಹಿನ್ನೆಲೆಯಿದೆ. ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು. ಅವರಿಗೆ ಯಾವ ಸಮಯದಲ್ಲಿ ಏನು ಹೇಳಬೇಕು ಅನ್ನೋದು ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಮಾತಿನಲ್ಲಿ ಸಾಹಿತ್ಯದ ಶಬ್ದಕೋಶವೇ ಅಡಗಿದೆ. ಅದನ್ನು ನಾನು ಕಲಿತುಕೊಳ್ಳುತ್ತೇನೆ. ಅಚ್ಚರಿ ಅಂದರೆ, ಎಸ್.ಎಂ.ಕೃಷ್ಣ ಸರ್ಕಾರ, ಗಂಗಾಧರಮೂರ್ತಿ ಕೊಲೆ ಪ್ರಕರಣ ಸಂಬಂಧ ಪಾದಯಾತ್ರೆ ಮಾಡಿದರು. ಬಿಜೆಪಿ ರಥಯಾತ್ರೆ ನಡೆಸಿತು. ಆಂಧ್ರದ ಜಗನ್ ಪಾದಯಾತ್ರೆ ಮಾಡಿದರು ಎಂದು ಹೇಳುವ ಮೂಲಕ ಪಾದಯಾತ್ರೆ ಇತಿಹಾಸ ನೆನಪಿಸಿದರು.
ಸಿನಿಮಾ ಸ್ಟೈಲ್, ಡಿಸೈನ್ ಶೂರ ಎಂದು ಹೇಳಿದ್ದೀರಿ. ಇದಕ್ಕೆ ನನಗೇನೂ ಬೇಸರವಿಲ್ಲ. ಮೇಕೆದಾಟು ಹೋರಾಟ ಪಕ್ಷಾತೀತ ಹೋರಾಟ. ಬಿಜೆಪಿ, ದಳ, ಸಂಘ ಸಂಸ್ಥೆಗಳು, ಸಿನಿಮಾ, ಮಠಾಧೀಶರು, ವಿದ್ಯಾರ್ಥಿಗಳು ಹೀಗೆ ಯಾರು ಬೇಕಾದರೂ ಬರಬಹುದು. ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ತಲಕಾವೇರಿಯಲ್ಲಿ ದೇವಾಲಯದ ಒಳಗೆ ಪ್ರವೇಶ ಮಾಡಲಿಲ್ಲ. ಸೂತಕ ಇತ್ತು. ಹಾಗಾಗಿ ನಾನು ದೂರದಿಂದಲೇ ದೇವಿಗೆ ನಮಸ್ಕರಿಸಿದೆ. ಅದನ್ನೂ ಟೀಕೆ ಮಾಡಿದರೆ? ನಾನು ನಟನೇ? ನನ್ನದು ನಟನೆಯೋ, ನೈಜತೆಯೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ನೀಡುವ ಬಿರುದನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಜೊತೆ ಸ್ಪರ್ಧಿಸುವಷ್ಟು ಶಕ್ತಿ ನನಗೆ ಇಲ್ಲ. ಅವರಿಗೆ ಶಕ್ತಿ ಇರಬಹುದು. ಅವರ ಮಾತಿಗೆ ಜನ ಉತ್ತರ ನೀಡುತ್ತಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆಯುತ್ತಿದೆ ಎಂದರು.
ಪಾದಯಾತ್ರೆ ನಡೆದೇ ನಡೆಯುತ್ತದೆ. ಅದಕ್ಕೆ ಅನುಮತಿ ಕೇಳುವ ಅಗತ್ಯ ಇಲ್ಲ. ಪ್ರತಿದಿನ ರಾತ್ರಿ 7 ಗಂಟೆಗೆ ಪಾದಯಾತ್ರೆ ಮುಗಿಯುತ್ತದೆ. ನಾವು ರಸ್ತೆಯಲ್ಲಿ ನಡೆಯಲು ಯಾರ ಅಪ್ಪಣೆ ಬೇಕು. ಮೇಕೆದಾಟು ಹೋರಾಟದಿಂದ ನಮ್ಮ ಪ್ರಾಣ ಹೋದರೂ ಸರಿ ನಾವು ಹಿಂದೆ ಸರಿಯುವುದಿಲ್ಲ. ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಖಚಿತವಾಗಿ ಹೇಳಿದರು.


