ಉತ್ತರ ಪ್ರದೇಶದ ಅಮೇಥಿಯಲ್ಲಿ 16 ವರ್ಷದ ದಲಿತ ಬಾಲಕಿಯನ್ನು ಬೆತ್ತದಿಂದ ಥಳಿಸಿ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಬಾಲಕಿಗೆ ಕಿರುಕುಳ ನೀಡಿರುವ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಹೋರಾಟ ಕೈಗೊಳ್ಳುವುದಾಗಿ ಕಾಂಗ್ರೆಸ್ ನಾಯಕ ಪ್ರಿಯಾಂಕ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಬಾಲಕಿಯನ್ನು ಸಂಪರ್ಕಿಸಿ ಆಕೆಯ ತಂದೆ ನೀಡಿದ ದೂರಿನ ಮೇಲೆ ಆರೋಪಿ ಸೂರಜ್ ಸೋನಿ, ಶಿವಂ ಮತ್ತು ಸಕಲ್ ವಿರುದ್ಧ ಪೋಕ್ಸೋ ಕಾಯ್ದೆ, ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮೇಥಿ ಪೊಲೀಸ್ ಅಧಿಕಾರಿ ಅರ್ಪಿತ್ ಕಪೂರ್ ತಿಳಿಸಿದ್ದಾರೆ.
ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಬಾಲಕಿ ಸಂಗ್ರಾಮ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ್ ಪುರ ಹಳ್ಳಿಯೊಂದರ ನಿವಾಸಿ ಎಂದು ಹೇಳಲಾಗಿದೆ.
ಇದೊಂದು ಅಮಾನವೀಯ ಕೃತ್ಯ. ಈ ಕೃತ್ಯ ಎಸಗಿದ ಪಾತಕಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಕಾಂಗ್ರೆಸ್ ಪಕ್ಷ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರೇ ಪ್ರತಿ ದಿನ ಉತ್ತರ ಪ್ರದೇಶದಲ್ಲಿ 35 ಮಂದಿ ದಲಿತರು ಮತ್ತು 135 ಮಂದಿ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ನಿಮ್ಮ ಕಾನೂನು ಮತ್ತು ಸುವ್ಯವಸ್ಥೆ ನಿದ್ರಿಸುತ್ತಿದೆ ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.