ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು. ಉದ್ಯೋಗ ಭದ್ರತೆ ನೀಡಬೇಕು. ಅತ್ಮಹತ್ಯೆ ಮಾಡಿಕೊಂಡಿರುವ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತುಮಕೂರಿನಲ್ಲಿ ಅತಿಥಿ ಉಪನ್ಯಾಸಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂದು ನೂರಾರು ಸಂಖ್ಯೆಯಲ್ಲಿದ್ದ ಅತಿಥಿ ಉಪನ್ಯಾಸಕರು ಒಕ್ಕೊರಲಿನಿಂದ ಹೇಳಿದ್ದಾರೆ.
ತುಮಕೂರಿನ ಟೌನ್ ಹಾಲ್ ನಲ್ಲಿ ಸಮಾವೇಶಗೊಂಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಮಿಸಿದ್ದ ಉಪನ್ಯಾಸಕರು ಅತಿಥಿ ಉಪನ್ಯಾಸಕರ ಸಂಘಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈಗ ಅಮಾನಿಕೆರೆ ಗಾಜಿನ ಮನೆಯ ಹಿಂಭಾಗದಲ್ಲಿ ಅತಿಥಿ ಉಪನ್ಯಾಸಕರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅತಿಥಿ ಉಪನ್ಯಾಸಕರ ಧರಣಿಯನ್ನು ಬೆಂಬಲಿಸಿ ಮಾತನಾಡಿದ ವಿದ್ಯಾರ್ಥಿ ನಾಯಕ ಈ.ಶಿವಣ್ಣ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಅತಿಥಿ ಉಪನ್ಯಾಸಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಖಾಸಗಿ ಖಾಲೇಜುಗಳಿಗೆ ಆದ್ಯತೆ ನೀಡಿ ಸರ್ಕಾರಿ ಕಾಲೇಜುಗಳನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡಿದೆ. ಸಂಕಷ್ಟದಲ್ಲೇ ಜೀವನ ದೂಡುತ್ತಾ ವಯೋಮಾನ ಮೀರಿದ್ದರೂ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅವರ ಸೇವೆಯನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.
ಹಿರಿಯ ಅತಿಥಿ ಉಪನ್ಯಾಸಕ ಡಾ.ಶಿವಣ್ಣ ತಿಮ್ಲಾಪುರ ಮಾತನಾಡಿ, ಸರ್ಕಾರಗಳು ಅತಿಥಿ ಉಪನ್ಯಾಸಕರನ್ನು ಕನಿಷ್ಠ ವೇತನಕ್ಕೆ ದುಡಿಸಿಕೊಳ್ಳುವ ಮೂಲಕ ಆಧುನಿಕ ಸರ್ಕಾರಿ ಜೀತಪದ್ದತಿ ಅನುಸರಿಸುತ್ತಿವೆ. ಇದು ಪ್ರಜಾಪ್ರಭುತ್ವ ಮಾದರಿಯ ಕಲ್ಯಾಣ ಸರ್ಕಾರದ ನೀತಿಗೆ ವಿರುದ್ಧವಾಗಿದೆ. ಕೊರೊನ ಕಾಲದಲ್ಲಿ ಅತಿಥಿ ಉಪನ್ಯಾಸರಿಗೆ ಉದ್ಯೋಗ ಇರಲಿಲ್ಲ. ತರಕಾರಿ, ಮಾಸ್ಕ್ ಮಾರಿ ಜೀವನ ದೂಡಿದರು. ಇದುವರೆಗೂ 70ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರದ ನೀತಿಗಳಿಂದ ಬಲಿಯಾಗಿದ್ದು, ಅವರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.
ಅತಿಥಿ ಉಪನ್ಯಾಸಕ ರಂಗಧಾಮಯ್ಯ ಮಾತನಾಡಿ, ಆರು ತಿಂಗಳು ಗೌರವ ಧನ ನೀಡಿ ಉಳಿದ ಅವಧಿಯಲ್ಲಿ ನಮ್ಮನ್ನು ಪುಕ್ಕಟ್ಟೆಯಾಗಿ ದುಡಿಸಿಕೊಳ್ಳಲಾಗುತ್ತಿದೆ. ದುಬಾರಿ ಮಾರುಕಟ್ಟೆಯಲ್ಲಿ 10-13 ಸಾವಿರ ವೇತನವನ್ನು ಆರು ತಿಂಗಳಿಗೊಮ್ಮೆ ಪಡೆದು ಜೀವನ ನಡೆಸಲಾಗದೆ ಅತಿಥಿ ಉಪನ್ಯಾಸಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಅವರನ್ನೇ ನಂಬಿದ್ದ ಕುಟುಂಬಗಳು ನಿಕೃಷ್ಟ ಜೀವನ ಸಾಗಿಸುತ್ತಿವೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಡಾ.ಕುಮಾರ್, ಪಿ.ವಿ.ಲೋಕೇಶ್, ಮಲ್ಲಿಕಾರ್ಜುನ ಎಂ.ಪಿ. ಸರಿತ, ಗಂಗಾಂಬಿಕ, ಡಾ.ಹನುಮಂತರಾಯಪ್ಪ, ಸುನಿಲ್ ಕುಮಾರ್, ಅಂಜನಮೂರ್ತಿ ಸೇರಿದಂತೆ ನೂರಾರು ಮಂದಿ ಇದ್ದಾರೆ.