ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತದ ಇತಿಹಾಸದಲ್ಲಿ ಮತಾಂತರಗೊಂಡವರೆಲ್ಲರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದಾಗಿ ನೀಡಿದ್ದ ಪ್ರಚೋದನಾತ್ಮಕ ಹೇಳಿಕೆಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೇಷರತ್ತಾಗಿ ಹಿಂಪಡೆದಿದ್ದಾರೆ.
ಎರಡು ದಿನಗಳ ಹಿಂದೆ ಉಡುಪಿ ಕೃಷ್ಣ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದು ಪುನರುಜ್ಜೀವನ ಕುರಿತು ಮಾತನಾಡಿದ್ದೆ. ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದ ಸೃಷ್ಟಿಸಿವೆ. ಆದ್ದರಿಂದ ನನ್ನ ಹೇಳಿಕೆಗಳನ್ನು ಬೇಷರತ್ತಾಗಿ ಹಿಂದಕ್ಕೆ ಪಡೆದುಕೊಳ್ಳುತ್ತೇನೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಶನಿವಾರ ತೇಜಸ್ವಿ ಸೂರ್ಯ ಮಾತೃ ಧರ್ಮ ತೊರೆದವರನ್ನು ಆದ್ಯತೆ ಮೇಲೆ ಮರಳಿ ತರಬೇಕು ಮತ್ತು ಅಸಹಜತೆಗೆ ಒಂದೇ ಸಂಭವನೀಯ ಪರಿಹಾರ ಎಂದಿದ್ದರು.
“ಭಾರತದ ಇತಿಹಾಸದಲ್ಲಿ ವಿವಿಧ ಸಾಮಾಜಿಕ-ರಾಜಕೀಯ, ಆರ್ಥಿಕ ಕಾರಣಗಳಿಗಾಗಿ ತಮ್ಮ ಮಾತೃ ಧರ್ಮವನ್ನು ತೊರೆದ ಜನರು, ಹಿಂದೂ ಧರ್ಮದಿಂದ ಹೊರಗುಳಿದಿರುವವರನ್ನು ಸಂಪೂರ್ಣವಾಗಿ ಮರಳಿ ಹಿಂದೂ ನಂಬಿಕೆಗೆ ಕರೆತರಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಸೂರ್ಯ ಪ್ರತಿಪಾದಿಸಿದರು.
ಮತಾಂತರ ವಿರೋಧಿ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಿದ ಎರಡು ದಿನಗಳ ನಂತರ ಸೂರ್ಯ ಹೇಳಿಕೆ ನೀಡಿದ್ದರು.
ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.