ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 14 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 12 ಸ್ಥಾನಗಳನ್ನು ಗೆದ್ದು ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಪಕ್ಷ 8 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೆ, ಶಿರೋಮಣಿ ಅಕಾಲಿದಳ ಒಂದು ಸ್ಥಾನ ಗಳಿಸಲಷ್ಟೇ ಶಕ್ತವಾಗಿದೆ.
ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಪಾಲಿಕೆಯ 35 ವಾರ್ಡುಗಳಿಗೆ ಒಂಬತ್ತು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಮತ ಎಣಿಕೆ ಕಾರ್ಯ ಮುಂದುವರಿದಿದೆ.
ಡಿಸೆಂಬರ್ 24ರಂದು ಮತದಾನ ನಡೆದು ಶೇ.60.45ರಷ್ಟು ಜನರು ಹಕ್ಕು ಚಲಾಯಿಸಿದ್ದರು. ಕಳೆದ ಐದು ವರ್ಷಳಲ್ಲಿ ಬಿಜೆಪಿ ತನ್ನ ಸಾಧನೆಗಳ ಮೇಲೆ ಚುನಾವಣೆ ಎದುರಿಸಿತ್ತು. ಚಂಡೀಗಢ ಪಾಲಿಕೆಯಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ಈ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ನಗರದ ಸ್ವಚ್ಛತೆಯ ಶ್ರೇಯಾಂಕದಲ್ಲಿ ಇಳಿಕೆ ಕಂಡಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಬಿಜೆಪಿ ಸಂಪೂರ್ಣ ವಿಫಲ ಆಗಿದೆ ಎಂದು ಕಾಂಗ್ರೆಸ್ ಮತ್ತು ಎಎಪಿ ಟೀಕಿಸಿವೆ.
ಐದು ವರ್ಷಗಳಿಗೆ ಒಮ್ಮೆ ನಡೆಯುವ ಪಾಲಿಕೆ ಚುನಾವಣೆಯಲ್ಲಿ ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರ ಹಿಡಿಯುತ್ತ ಬಂದಿದ್ದವು. ಆದರೆ ಈ ಬಾರಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಿದ್ದು ಅಧಿಕ ಸ್ಥಾನಗಳನ್ನು ಪಡೆದುಕೊಂಡು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಚ್ಚರಿಯ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ, ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ, “ಜನರು ವರ್ಷಗಳಿಂದ ಬದಲಾವಣೆಗಾಗಿ ಹಂಬಲಿಸುತ್ತಿದ್ದರು. ಇದು ಕೇಜ್ರಿವಾಲ್ ಆಡಳಿತದ ಮಾದರಿಯ ವಿಜಯ” ಎಂದು ಬಣ್ಣಿಸಿದ್ದಾರೆ.