ದೆಹಲಿ ಮತ್ತು ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನಾಂಗೀಯ ಶುದ್ದೀಕರಣ ಮಾಡುವಂತೆ ಕರೆ ನೀಡಿರುವ ಧಾರ್ಮಿಕ ಮುಖಂಡರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ 76 ಹಿರಿಯ ವಕೀಲರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಧಾರ್ಮಿಕ ಮುಖಂಡರ ಈ ಹೇಳಿಕೆಗಳು ಕೇವಲ ದ್ವೇಷದ ಭಾಷಣಗಳು ಮಾತ್ರವಲ್ಲ, ಇಡೀ ಸಮುದಾಯದ ಹತ್ಯೆಗೆ ಮುಕ್ತ ಕರೆಯಾಗಿದೆ. ಹಾಗಾಗಿ ಇಂತಹ ಘಟನೆಗಳನ್ನು ತಡೆಯಲು ನ್ಯಾಯಾಂಗ ತುರ್ತು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹಿರಿಯ ವಕೀಲರಾದ ದುಷ್ಯಂತ್ ದವೆ, ಪ್ರಶಾಂತ್ ಭೂಷಣ್, ವೃಂದಾ ಗ್ರೋವರ್, ಸಲ್ಮಾನ್ ಖುರ್ಷಿದ್ ಮತ್ತು ಪಾಟ್ನಾ ಹೈಕೋರ್ಟ್ ಮಾಜಿ ನ್ಯಾಯಾಧೀಶೆ ಅಂಜನಾ ಪ್ರಕಾಶ್ ಸೇರಿದಂತೆ ಹಲವರು ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ದ್ವೇಷದ ಭಾಷಣಗಳು, ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತವೆ. ಇದರಿಂದ ಲಕ್ಷಾಂತರ ಮುಸ್ಲೀಂ ನಾಗರಿಕರ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲೀಮರ ವಿರುದ್ಧ ಹತ್ಯಾಕಾಂಡ ಮತ್ತು ಶಸ್ತ್ರಾಸ್ತ್ರಗಳ ಬಳಕೆಗಾಗಿ ಬಹಿರಂಗ ಕರೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿದೆ. ಹೀಗಾಗಿ ಹರಿದ್ವಾರದ ಘಟನೆಯ ನಾಲ್ಕು ದಿನಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಹೆಸರಿಸಿ ನಂತರ ಧರ್ಮದಾಸ್ ಮತ್ತು ಸಾಧ್ವಿ ಅನ್ನಪೂರ್ಣ ಅವರ ಹೆಸರನ್ನು ಸೇರಿಸಲಾಯಿತು ಎಂದು ಗಮನ ಸೆಳೆದಿದ್ದಾರೆ.
ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಐಪಿಸಿ 153, 153ಎ, 153ಬಿ, 295ಎ, 504, 506, 120ಬಿ, 34ರ ನಿಬಂಧನೆಗಳ ಅಡಿಯಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂಬುದನ್ನು ಗಮನಿಸಬಹುದು. ಹೀಗಾಗಿ, ಇಂತಹ ಘಟನೆಗಳನ್ನು ತಡೆಯಲು ನ್ಯಾಯಾಂಗ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರದಲ್ಲಿ ಹೇಳಿದೆ.