ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ ಎಂಬ ಮಾತುಗಳನ್ನು ಪುನರುಚ್ಚರಿಸುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.
ವಿಜಯವಾಡದಲ್ಲಿ ಸಿದ್ದಾರ್ಥ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಸ್ತವವೆಂದರೆ ನ್ಯಾಯಾಂಗ ನ್ಯಾಯಾಧೀಶರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿರುವ ಅನೇಕ ಆಟಗಾರರಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಸರ್ಕಾರಗಳು, ರಾಜ್ಯಪಾಲರು, ಹೈಕೋರ್ಟ್ ಕೊಲಿಜಿಯಂಗಳು, ಗುಪ್ತಚರ ಮತ್ತು ಅಭ್ಯರ್ಥಿಯ ಸೂಕ್ತತೆಯನ್ನು ಪರೀಕ್ಷಿಸಲು ನೇಮಕಗೊಂಡ ಉನ್ನತ ಕಾರ್ಯನಿರ್ವಾಹಕರು ಸೇರಿ ಹಲವು ಅಧಿಕಾರಿಗಳು ನ್ಯಾಯಾಧೀಶರ ನೇಮಕದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಆದರೆ ಉತ್ತಮ ತಿಳುವಳಿಕೆಯುಳ್ಳವರು ಸಹ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ ಎಂಬ ಪ್ರಚಾರದಲ್ಲಿ ತೊಡಗಿದ್ದಾರೆ ಎಂಬುದು ಬೇಸರ ಉಂಟುಮಾಡಿದೆ ಎಂದು ರಮಣ ತಿಳಿಸಿದರು.
ನ್ಯಾಯಾಂಗ ಖಾಲಿ ಹುದ್ದೆಗಳ ಭರ್ತಿಯ ಸವಾಲುಗಳನ್ನು ಎದುರಿಸುತ್ತಿದೆ. ಹೈಕೋರ್ಟ್ ಗಳು ಮಾಡಿದ ಕೆಲವು ಶಿಫಾರಸುಗಳನ್ನು ಕೇಂದ್ರ ಕಾನೂನು ಸಚಿವಾಲಯವು ಸುಪ್ರೀಂಕೋರ್ಟ್ ಗೆ ಕಳುಹಿಸಲು ಬಾಕಿ ಇದೆ ಎಂದು ತಿಳಿಸಿದರು.
ನ್ಯಾಯ ವಿತರಣೆಯ ಸಂದರ್ಭದಲ್ಲಿ ಕೆಲ ಪಕ್ಷಗಾರರು ಸಾಮಾಜಿಕ ಜಾಲತಾಣದ ಮೂಲಕ ನ್ಯಾಯಾಧೀಶರ ವಿರುದ್ಧ ಟೀಕೆ ಮಾಡುತ್ತಿದ್ದು, ಇದು ಸಂಘಟಿತ ದಾಳಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾನೂನುಗಳನ್ನು ರಚಿಸುವ ಶಾಸಕಾಂಗ ಸಾಂವಿಧಾನಿಕ ತತ್ವಗಳಿಗೆ ಬದ್ದವಾಗಿರುವುದನ್ನು ನಿರೀಕ್ಷಿಸುತ್ತೇವೆ. ಹಾಗಾಗಿ ಕಾನೂನಿನಿಂದ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವ ಬಗ್ಗೆ ಅವರು ಯೋಚಿಸಬೇಕು ಎಂದು ಸಲಹೆ ನೀಡಿದರು.


