ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ನೇರವಾಗಿ, ಧೈರ್ಯದಿಂದ ಸತ್ಯ ಹೇಳುವುದು ಕಷ್ಟವಾಗಿದೆ. ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದರೆ ಅವರಿಗೆ ಕಹಿಯಾಗಿ ಕಾಣುತ್ತದೆ. ಇದಕ್ಕೆ ಅವರ ವಕ್ರ ಕಣ್ಣುಗಳು ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಕ್ರಕಣ್ಣುಗಳಿಗೆ ಹೆದರದೆ ಪ್ರತಿಯೊಬ್ಬ ಪ್ರಜೆಯೂ ಸತ್ಯವನ್ನು ಧೈರ್ಯದಿಂದ ಹೇಳಲು ಮುಂದಾಗಬೇಕು. ಕೋಮುವಾದಿಗಳ ಕೈಗೆ ಸಿಕ್ಕಿ ಪ್ರಾಣ ಕಳೆದುಕೊಂಡ ಡಾ.ಎಂ.ಎಂ.ಕಲಬುರ್ಗಿ ಏನು ತಪ್ಪು ಮಾಡಿದ್ದರು? ಸತ್ಯ ಹೇಳಲು ಸಮಾಜದಲ್ಲಿ ವೈಚಾರಿಕತೆ ಬೆಳೆದಸಲು ಪ್ರಯತ್ನ ಪಟ್ಟಿದ್ದರು ಎಂದು ತಿಳಿಸಿದರು.
ಗೌರಿ ಲಂಕೇಶ್ ಕೂಡ ಇದೇ ರೀತಿ ಸತ್ಯ ಹೇಳಲು ಹೊರಟಿದ್ದರು. ಅವರಿಬ್ಬರನ್ನೂ ಕೋಮುವಾಧಿಗಳೇ ಕೊಂದು ಹಾಕಿದರು ಎಂದು ಆರೋಪಿಸಿದರು.
ಶಿಕ್ಷಣ ಹೆಚ್ಚಿದಷ್ಟೂ ನಮ್ಮಲ್ಲಿ ಮೌಢ್ಯ, ಅಂಧಶ್ರದ್ದೆಗಳೆಲ್ಲ ಹೆಚ್ಚಾಗುತ್ತಿದೆ. ಶಿಕ್ಷಣ ನಮ್ಮಲ್ಲಿ ವೈಚಾರಿಕತೆ ಬೆಳೆಸದೆ ಇರುವುದೇ ಇದಕ್ಕೆ ಕಾರಣ. ಸತ್ಯ ಹೇಳುವವರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಎಂದು ಆರೋಪಿಸುತ್ತಾರೆ. ಮಹಾತ್ಮಗಾಂಧಿ ಕೊಂದವರಿಗೆ ಗುಡಿ ಕಟ್ಟಿ ಪೂಜೆ ಮಾಡುತ್ತಾರೆ. ವಿಚಾರವಂತರೆಲ್ಲರೂ ಇದನ್ನು ವಿರೋಧಿಸದೆ ಹೋದರೆ ಸಂವಿಧಾನವೂ ಉಳಿಯುವುದಿಲ್ಲ. ದೇಶವೂ ಉಳಿಯುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದ ಸೇರಿದಂತೆ ಎಲ್ಲ ಮಹಾಪುರುಷರ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅವುಗಳನ್ನು ಪಾಲನೆ ಮಾಡುವಲ್ಲಿ ಎಡವಿದ್ದೇವೆ. ಇದರಿಂದ ಶಿಕ್ಷಿತರಾದರೂ ವೈಚಾರಿಕತೆ ಬೆಳೆಸಿಕೊಂಡಿಲ್ಲ ಎಂದು ಹೇಳಿದರು.
ಸಂಗೀತ ನಿರ್ದೇಶಕ ಹಂಸಲೇಖ ವಾಸ್ತವಿಕ ನೆಲೆಗಟ್ಟಿನ ಮೇಲೆ ಮಾತನಾಡಿದರು. ಅದಕ್ಕಾಗಿ ಅವರ ಮೇಲೆ ಬಿದ್ದರು. ಕ್ರಿಮಿನಲ್ ಕೇಸ್ ಹಾಕಿದರು. ಅವರು ಹೇಳಿರುವುದು ಯಾವ ಕಾನೂನಿನ ಪ್ರಕಾರ ಅಪರಾಧ ಎಂದು ಪ್ರಶ್ನಿಸಿದರು.
ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ನೀಡಿದ ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಯನ್ನು ಸಿದ್ದರಾಮಯ್ಯ ಅವರಿಗೆ ಪ್ರದಾನ ಮಾಡಲಾಯಿತು. ಡಾ.ಕೆ.ಮರುಳಸಿದ್ದಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಎಸ್.ಮಹದೇವಯ್ಯ, ಡಾ.ಎಂ.ಎಸ್.ಆಶಾದೇವಿ, ಗೋ,ರು.ಚನ್ನಬಸಪ್ಪ ಇದ್ದರು.