ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ್ದಕ್ಕೆ ಪ್ರತಿಕಾರವಾಗಿ ಬೆಂಗಳೂರಿನಲ್ಲಿ ಕೆಲವರು ಛತ್ರಪತಿ ಶಿವಾಜಿ ಪ್ರತಿಮೆಗೆ ಕಪ್ಪು ಮಸಿ ಬಳಿದ ನಂತರ ಬೆಳಗಾವಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ಸಂಬಂಧ 27 ಮಂದಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಪ್ರತಿಮೆಗೆ ಕೆಲವರು ಕಪ್ಪು ಮಸಿ ಬಳಿದಿರುವ ವಿಡಿಯೋ ವೈರಲ್ ಆದ ನಂತರ ಬೆಳಗಾವಿಯಲ್ಲಿ ಉದ್ವಿಗ್ನತೆ ಉಂಟಾಗಿದೆ.
ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿಗರು ಬೆಳಗಾವಿಯಲ್ಲಿ ಜಮಾಯಿಸಿ ಸಂಭಾಜಿ ಮಹಾರಾಜ್ ಚೌಕ್‌ನಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಬೆಳಗಾವಿಯಲ್ಲಿ ಸುಮಾರು 26 ವಾಹನಗಳನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಛತ್ರಪತಿ ಶಿವಾಜಿಗೆ ಆಗಿರುವ ಅವಮಾನ ಹಿಂದೂ ಸಮಾಜಕ್ಕೂ ಅವಮಾನ. ಕೆಲ ಕಿಡಿಗೇಡಿಗಳು ಶಿವಾಜಿ ಪ್ರತಿಮೆಗೆ ಅವಮಾನ ಮಾಡಿರುವ ಕೃತ್ಯ ಖಂಡನೀಯ ಎಂದು ಬೆಳಗಾವಿ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ಘಟನೆಯ ಹಿಂದಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿ ವಿನಂತಿಸುತ್ತೇನೆ. ಘಟನೆಯು ರಾಷ್ಟ್ರಕ್ಕೆ ಮಾಡಿದ ಅವಮಾನ. ಇದರ ಹಿಂದಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದರು.
ಕರ್ನಾಟಕ ಗೃಹ ಅರಗ ಜ್ಞಾನೇಂದ್ರ ಮಾತನಾಡಿ, ಇಂತಹ ಘಟನೆಗಳಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಮಾಡಿದ ಘಟನೆಯನ್ನು ಖಂಡಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ಅವರ ಹೆಸರಿನಲ್ಲಿ ಅವಮಾನಿಸುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ನನಗೆ ಮಾಹಿತಿ ಇದ್ದು, ಬೆಂಗಳೂರು ಮತ್ತು ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಿದೆ. ಕೆಲವರನ್ನು ಬಂಧಿಸಿದ್ದು ರಾಜ್ಯದ ಜನತೆ ಶಾಂತಿ ಸೌಹಾರ್ದತೆ ಕಾಪಾಡಲು ಸಹಕರಿಸಬೇಕೆಂದು ಕೋರಿದರು.


