ಭಾರತೀಯ ಕಿಸಾನ್ ಯೂನಿಯನ್ ನಾಯಕ ಗುರುನಾಮ್ ಸಿಂಗ್ ಚುಡಾನಿ ಪಂಜಾಬ್ ನಲ್ಲಿ ನೂತನ ರಾಜಕೀಯ ಪಕ್ಷ ಸ್ಥಾಪಿಸಿದ್ದು ಅದಕ್ಕೆ ಸಂಯುಕ್ತ ಸಂಘರ್ಷ ಪಾರ್ಟಿ ಎಂದು ಹೆಸರಿಡಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚುಡಾಣಿ, ಪಂಜಾಬ್ ನಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಎಲ್ಲಾ 117 ಕ್ಷೇತ್ರಗಳಲ್ಲೂ ಸರ್ಧಿಸಲು ಯೋಜಿಸಿದೆ. ಆದರೆ ತಾನು ಪಂಜಾಬ್ ನಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ನಡೆಸಿದ ಪ್ರತಿಭಟನೆಯಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಚುಡಾನಿ, ದೆಹಲಿ ಗಡಿಯಲ್ಲಿರುವಾಗಲೇ ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಚುನಾವಣೆಗೆ ಸ್ಪರ್ಧಿಸುವ ಮತ್ತು ಪಂಜಾಬ್ ನಲ್ಲಿ ನಮ್ಮ ಸರ್ಕಾರ ಬಂದರೆ 2024ರಲ್ಲಿ ಇಡೀ ದೇಶವು ಪಂಜಾಬ್ ಮಾದರಿಯನ್ನು ನೋಡುತ್ತದೆ ಎಂದು ಹೇಳಿದ್ದರು.
ನಾವು ‘ಮಿಷನ್ ಪಂಜಾಬ್’ ನಡೆಸುತ್ತಿದ್ದೇವೆ- ಮತ ಇರುವವರು ಆಡಳಿತ ನಡೆಸಬೇಕೇ ಹೊರತು ಹಣ ಇರುವವರಲ್ಲ. ಇದುವರೆಗೆ ಶ್ರೀಮಂತರ ಪರವಾಗಿ ಕಾನೂನುಗಳನ್ನು ರಚಿಸಲಾಗುತ್ತಿತ್ತು. ನಾವು ಮತದಾರರ ಪರವಾಗಿ ಕಾನೂನು ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮತ್ತು ಜೆಜೆಪಿ ಚುಡಾನಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿವೆ. ಆಂದೋಲನದ ಮೂಲಕ ಅವರು ಇನ್ನೊಬ್ಬ ಅರವಿಂದ್ ಕೇಜ್ರಿವಾಲ್ ಆಗಲು ಬಯಸುತ್ತಾರೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಆರೋಪಿಸಿದ್ದಾರೆ.
ಚಡಾನಿ ಕಾಂಗ್ರೆಸ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ರೈತ ನಾಯಕರಲ್ಲ ಎಂದು ಬಿಜೆಪಿ ಟೀಕಿಸಿದೆ.


