ಲಖಿಂಪುರಖೇರಿ ರೈತರ ಹತ್ಯಾ ಪ್ರಕರಣ ಸಂಬಂಧ ಕೇಂದ್ರ ರಾಜ್ಯ ಗೃಹ ಸಚಿವರ ರಾಜಿನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವುದರಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕ ಪಟ್ಟಿಯಿಂದ ಸಚಿವ ಅಜಯ್ ಮಿಶ್ರಾ ಅವರನ್ನು ಕೈಬಿಡಲಾಗಿದೆ.
ಸಚಿವ ಅಜಯ್ ಮಿಶ್ರಾ ರಾಜಿನಾಮೆಗೆ ಪ್ರತಿಪಕ್ಷಗಳ ಒತ್ತಡ ಹೆಚ್ಚಾಗಿದೆ. ಹಾಗಾಗಿ ಸಂಸತ್ ಅಧಿವೇಶನದ ಕಲಾಪಕ್ಕೆ ಅಡ್ಡಿ ಆಗಿದೆ ಇದರಿಂದ ಆತಂಕಕ್ಕೆ ಒಳಗಾಗಿರುವ ಬಿಜೆಪಿ ನಾಯಕರು, ಚುನಾವಣಾ ಪ್ರಚಾರದಿಂದ ಸಚಿವ ತೆನಿ ಅವರನ್ನು ಕೈಬಿಟ್ಟಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಂದ ಡಿಸೆಂಬರ್ 19 ರಂದು ಮಥುರಾದಿಂದ ಬಿಜೆಪಿಯ ‘ಜನ ವಿಶ್ವಾಸ ಯಾತ್ರೆ’ಗೆ ಚಾಲನೆ ದೊರೆಯಲಿದೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಬೇಕಿತ್ತು, ಆದರೆ ಅವರಿಂದ ಯಾವುದೇ ಖಚಿತತೆ ಸಿಕ್ಕಿಲ್ಲ.
ಯಾತ್ರೆ ಆರಂಭಕ್ಕೂ ಮುನ್ನ ಮಥುರಾದ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಸಿಎಂ ಮಾತನಾಡಲಿದ್ದಾರೆ. ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಮತ್ತು ಸಂತೋಷ್ ಗಂಗ್ವಾರ್ ಕೂಡ ಅಕ್ಬರ್‌ಪುರ ಮತ್ತು ನೌಜಿಲ್ ಪ್ರದೇಶಗಳಲ್ಲಿ ಯಾತ್ರೆಯಲ್ಲಿ ಭಾಗಿಯಾಗುವರು.
ಯಾತ್ರೆಯು ಜಿಲ್ಲೆಯ ಮಥುರಾ, ಛಾಟಾ ಮತ್ತು ಮತ್ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬ್ರಜ್ ಮತ್ತು ಅವಧ್ ಸೇರಿ ಹಲವು ಪ್ರದೇಶಗಳಿಂದ ಬಿಜೆಪಿ ಆರು ಜನ ವಿಶ್ವಾಸ ಯಾತ್ರೆಗಳನ್ನು ಕೈಗೊಳ್ಳುತ್ತಿದೆ. ಎಲ್ಲಾ ಆರು ಯಾತ್ರೆಗಳು ಜನವರಿ 10, 2022 ರಂದು ಲಕ್ನೋದಲ್ಲಿ ಮುಕ್ತಾಯಗೊಳ್ಳಲಿವೆ.


