ಅತ್ಯಾಚಾರದ ಕುರಿತು ಕರ್ನಾಟಕ ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ದೆಹಲಿ ಮೂಲದ ಎನ್.ಜಿ.ಒ ಶುಕ್ರವಾರ ಕರ್ನಾಟಕ ರಾಜ್ಯಪಾಲರಿಗೆ ದೂರು ದಾಖಲಿಸಿದೆ.
ಸಂವಿಧಾನ ಮತ್ತು ಮಹಿಳೆಯರ ವಿರುದ್ಧ ಸಂವೇದನಾರಹಿತ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿರುವ ರಮೇಶ್ ಕುಮಾರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳೆಯರ ಘನತೆಯಿಂದ ಬದುಕುವ ಹಕ್ಕಿಗೆ ಧಕ್ಕೆ ತಂದಿರುವ ಕಾರಣ ಅವರನ್ನು ಕರ್ನಾಟಕ ವಿಧಾನಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೊಸೈಟಿ ಫಾರ್ ಸೆಕ್ಯೂರಿಂಗ್ ಜಸ್ಟಿಸ್ ಉಪಾಧ್ಯಕ್ಷ ವಿನೀತ್ ಜಿಂದಾಲ್ ಮೂಲಕ ವಕೀಲರು ಶುಕ್ರವಾರ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗಹೇಲೋಟ್ ಅವರಿಗೆ ಮಹಿಳೆಯರ ವಿರುದ್ಧ ಅವಮಾನಕರ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಶಾಸಕರ ಈ ಆಕ್ಷೇಪಾರ್ಹ, ಅತಿರೇಕದ ಮತ್ತು ಅಸಹ್ಯಕರ ಹೇಳಿಕೆಯು ಮಹಿಳೆಯರ ಬಗ್ಗೆ ಅವರ ನಿರಾಶಾವಾದಿ ದೃಷ್ಟಿಕೋನ ಪ್ರತಿಬಿಂಬಿಸುತ್ತದೆ. ನಮ್ಮಂತಹ ಪ್ರಗತಿಪರ ಮತ್ತು ಸಶಕ್ತ ಸಮಾಜಕ್ಕೆ ಇಂತಹ ಹೇಳಿಕೆಯನ್ನು ಶಾಸಕರು ವಿಧಾನಸಭೆಯಲ್ಲಿ ಬಳಸಿರುವುದು ಅವಮಾನಕರವಾಗಿದೆ. ಸಂವೇದನಾರಹಿತ ವಿಧಾನವಾಗಿದೆ ಎಂದು ದೂರಲಾಗಿದೆ.
ಅವರ ಹೇಳಿಕೆ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುವಂತಹದ್ದು ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಪ್ರತಿನಿಧಿಗಳು, ಕಾನೂನು ಗೌರವಿಸುವಲ್ಲಿ ವಿಫಲವಾದರೆ, ಅವರಿಂದ ಇತರರು ಏನನ್ನು ನಿರೀಕ್ಷಿಸಬಹುದು ಎಂದು ದೂರಿನಲ್ಲಿ ಹೇಳಿದೆ.
ಮಹಿಳೆಯರನ್ನು ದೇವರೆಂದು ಪರಿಗಣಿಸುವ ಮತ್ತು ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಕರ್ನಾಟಕ ರಾಜ್ಯ ವಿಧಾನಸಭೆಯ ಪರಿಸ್ಥಿತಿ ದಯನೀಯ ಚಿತ್ರಣವನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.