ಪಂಜಾಬ್ ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಬಿಜೆಪಿ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ.
ಅಮರಿಂದರ್ ಸಿಂಗ್ ಶುಕ್ರವಾರ ಬಿಜೆಪಿಯ ಪಂಜಾಬ್ ಉಸ್ತುವಾರಿ ಮತ್ತು ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಬಿಜೆಪಿಯಿಂದ ಘೋಷಣೆ ಹೊರಬಿದ್ದಿದೆ.
ಇಂದು ಬಿಜೆಪಿ ಮತ್ತು ಅಮರಿಂದರ್ ಸಿಂಗ್ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಲಿದ್ದಾರೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಶೇಖಾವತ್ ಸ್ಪಷ್ಟಪಡಿಸಿದರು.
ಸಿಂಗ್ ಅವರ ಜೊತೆ ಸೀಟು ಹಂಚಿಕೆಯ ವಿವರಗಳನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಶೇಖಾವತ್ ಹೇಳಿದರು.
101ರಷ್ಟು ಮೈತ್ರಿಕೂಟ ಖಂಡಿತವಾಗಿಯೂ ಗೆಲ್ಲಲಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು. ಸೀಟು ಅಂತಿಮಗೊಳಿಸುವಲ್ಲಿ ಗೆಲ್ಲುವುದು ಮುಖ್ಯ ಮಾನದಂಡವಾಗಿರುತ್ತದೆ ಎಂದರು.
ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದ ಕೆಲವೇ ದಿನಗಳಲ್ಲಿ ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದರು.
ಮೊದಲಿನಿಂದಲೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಹರಿಹಾಯುತ್ತಿರುವ ಅಮರಿಂದರ್ ಸಿಂಗ್, ಸಿಧು ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಅದರಂತೆ ಬಿಜೆಪಿ ಮತ್ತು ಅಮರಿಂದರ್ ಸಿಂಗ್ ಮೈತ್ರಿ ಮಾಡಿಕೊಂಡಿದ್ದಾರೆ.