ಅತ್ಯಾಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಬಳಿಕ ಕ್ಷಮೆ ಯಾಚಿಸಿರುವ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರು ಖಂಡನೆ ವ್ಯಕ್ತಪಡಿಸಿದ್ದು, ವಾಗ್ದಾಳಿ ನಡೆಸಿದ್ದಾರೆ.
ಅತ್ಯಾಚಾರವನ್ನು ಆನಂದಿಸಿ ಎಂಬ ಹೇಳಿಕೆಗೆ ಇದು ಅತ್ಯಂತ ಆಕ್ಷೇಪಾರ್ಹ ಮತ್ತು ಸಂವೇದನಾರಹಿತವಾದ ತಮಾಷೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸ್ಪೀಕರ್ ಮತ್ತು ಹಿರಿಯ ಶಾಸಕರು ರೋಲ್ ಮಾಡೆಲ್ ಆಗಿರಬೇಕು ಮತ್ತು ಅಂತಹ ಸ್ವೀಕಾರಾರ್ಹವಲ್ಲದ ನಡವಳಿಕೆಯಿಂದ ದೂರ ಇರಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಕಿವಿಮಾತು ಹೇಳಿದ್ದಾರೆ.
ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ, ಅತ್ಯಾಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಾನು ಈ ಹೇಳಿಕೆನ್ನು ಖಂಡಿಸುತ್ತೇನೆ. ಅವರು ಸ್ಪೀಕರ್ ಮತ್ತು ಸಚಿವರಾಗಿದ್ದವರು. ನನಗೆ ಇದು ಇಷ್ಟವಾಗಲಿಲ್ಲ. ರಮೇಶ್ ಕುಮಾರ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಆದರೆ ಅಂತಹ ಭಾಷೆ ಖಂಡನೀಯವಾಗಿದೆ. ನಾವು ಮಹಿಳೆಯರನ್ನು ಗೌರವಿಸುತ್ತೇವೆ. ಸಭಾಧ್ಯಕ್ಷರು ಈ ಹೇಳಿಕೆಗೆ ನಗುತ್ತಿದ್ದರು. ನಾವು ಅದನ್ನೂ ಸಹ ಅನುಮೋದಿಸುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.
ಕ್ಷಮೆ ಯಾಚಿಸಿದ ರಮೇಶ್ ಕುಮಾರ್:
“ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಎಂಬ ಗಾದೆ ಇದೆ. ನೀವು ಅದೇ ಸ್ಥಾನದಲ್ಲಿದ್ದೀರಿ” ಎಂದು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಯಾಗಿ ರಾಜ್ಯ ವಿಧಾನಸಭೆ ನಗೆಗಡಲಲ್ಲಿ ತೇಲಿತು. ಸ್ಪೀಕರ್ ನಗುತ್ತಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿಸಿತು.
ಕೂಡಲೇ ರಮೇಶ್ ಕುಮಾರ್ ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿ,”ಆಫ್-ದಿ-ಕಫ್” ಎಂದು ಕರೆದರು.
“ವಿಭಿನ್ನ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಾಗಿ ಪ್ರತಿಯೊಬ್ಬರನ್ನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ನನ್ನ ಉದ್ದೇಶ ಯಾರನ್ನೂ ನೋಯಿಸುವುದಾಗಿರಲಿಲ್ಲ. ಮುಂದೆ ನಾನು ಪದಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತೇನೆ” ಎಂದು ರಮೇಶ್ ಕುಮಾರ್ ಹೇಳಿದ್ದಾರೆ.