ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ರಾಜ್ಯಕ್ಕೆ ಅತಿ ಹೆಚ್ಚು ಪರಿಹಾರ ರೂಪದಲ್ಲಿ ಹಣ ನೀಡಿದ್ದಾರೆ ಎಂಬ ಬಿಜೆಪಿ ಮುಖಂಡರ ಹೇಳಿಕೆ ಶುದ್ದ ಸುಳ್ಳು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನರೇಂದ್ರ ಮೋದಿ ಅವರು ಜಾಸ್ತಿ ಪರಿಹಾರ ಕೊಟ್ಟಿದ್ದಾರೆ ಎಂದು ಸುಳ್ಳು ಹೇಳುವ ಬದಲು ಕೇಂದ್ರ ಸರ್ಕಾರಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಪರಿಹಾರವನ್ನಾದರೂ ತರಲು ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕಿತ್ತು ಎಂದು ಹೇಳಿದ್ದಾರೆ.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ 5,495 ಕೋಟಿ ರೂ ಹಣವನ್ನು ತರಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು ಮತ್ತು ರಾಜ್ಯ ಸರ್ಕಾರ ಪ್ರಧಾನಿಯವರನ್ನು ಕೇಳಿದ್ದಾರೆಯೇ? ಪ್ರತಿಭಟನೆ ಮಾಡಿದ್ದಾರೆಯೇ? ಇದು ರಾಜ್ಯಕ್ಕಾದ ಅನ್ಯಾವಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ನಮ್ಮ ರಾಜ್ಯದಿಂದ ವಿವಿಧ ರೂಪದ ತೆರಿಗೆಗಳ ಮೂಲಕ ಪ್ರತಿ ವರ್ಷ ಸುಮಾರು 3 ಲಕ್ಷ ಕೋಟಿ ರೂ ಹಣ ಕೇಂದ್ರಕ್ಕೆ ಸಂದಾಯ ಆಗುತ್ತಿದೆ. ಇದರಲ್ಲಿ ಸುಮಾರು 50-60 ಸಾವಿರ ಕೋಟಿ ರೂ ಮಾತ್ರ ನಮ್ಮ ಪಾಲಿನ ಅನುದಾನದ ರೂಪದಲ್ಲಿ ಮರಳಿ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಸಿಗುತ್ತಿರುವ ಎನ್.ಡಿ.ಆರ್.ಎಫ್ ಹಣ, ತೆರಿಗೆ ಪಾಲು, ಅನುದಾನದ ಪ್ರಮಾಣ ಅತ್ಯಂತ ಕಡಿಮೆ. ನಮಗೆ ಏಕೆ ಈ ಅನ್ಯಾಯ ಎಂದು ಕೇಳಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕು. ಆಗ ಡಬಲ್ ಇಂಜಿನ್ ಸರ್ಕಾರ ವೇಗವಾಗಿ ಕೆಲಸ ಮಾಡುತ್ತದೆ ಎಂದು ಪ್ರಧಾನಿ ಹೇಳಿದ್ದರು. ಈಗ ಎರಡೂ ಬಿಜೆಪಿ ಸರ್ಕಾರಗಳು ಸೇರಿ ಡಬಲ್ ದೋಖಾ ಸರ್ಕಾರ ನಡೆಸುತ್ತಿವೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೇವಲ ಎರಡು ವರ್ಷಗಳಲ್ಲಿ ರಾಜ್ಯದ ತೆರಿಗೆ ಪಾಲಿನಲ್ಲಿ 18 ಸಾವಿರ ಕೋಟಿ ಖೋತ ಆಗಿದೆ. ಈ ಅನ್ಯಾಯದ ವಿರುದ್ಧ ಬಿಜೆಪಿ ಯಾವ ನಾಯಕರು ಮಾತನಾಡುತ್ತಿಲ್ಲ ಎಂದು ಹೇಳಿದರು.
ಪ್ರವಾಹ, ಅತಿವೃಷ್ಟಿ ನಷ್ಟದ ಕುರಿತು ರಾಜ್ಯ ಸರ್ಕಾರ ಕೇಂದ್ರದ ಪರಿಹಾರಕ್ಕಾಗಿ ನಾಲ್ಕು ಮನವಿ ನೀಡಿದೆ. ಆದರೆ ಇದುವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರ ಬಂದಿಲ್ಲ ಎಂದು ಟೀಕಿಸಿದರು.


