ಗುತ್ತಿಗೆದಾರರ ಸಂಘವು ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರವೂ ಇಡೀ ದೇಶಕ್ಕೆ ಅಚ್ಚರಿ ಮೂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುತ್ತಿಗೆದಾರರು ಬರೆದಿರುವ ಪತ್ರ ಬಿಜೆಪಿ ಸರ್ಕಾರದ ಕಮಿಷನ್ ವಿಷಯವನ್ನು ಬಹಿರಂಗಪಡಿಸಿದೆ. ಅದು ಕೂಡ ನಮ್ಮ ಹೋರಾಟದ ಆದ್ಯ ವಿಷಯಗಳಲ್ಲಿ ಒಂದು. ಅಧಿವೇಶನದಲ್ಲಿ ನಾವು ಎಲ್ಲ ವಿಚಾರಗಳನ್ನು ಒಂದೇ ದಿನ ತೆಗೆದುಕೊಳ್ಳಲು ಆಗುವುದಿಲ್ಲ. ಆದರೆ ಭ್ರಷ್ಟಾಚಾರದ ಕುರಿತು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.
ಸರ್ಕಾರ ಉದ್ದೇಶಪೂರ್ವಕವಾಗಿ ಮತಾಂತರದ ವಿಚಾರವನ್ನು ಅಂತಿಮ ಗಳಿಗೆಯಲ್ಲಿ ಚರ್ಚೆಗೆ ತರುತ್ತಿದೆ. ನಾವು ಅದಕ್ಕೆ ಸಿದ್ಧವಾಗಿದ್ದು, ಸಂಪುಟದಲ್ಲಿ ಅನುಮೋದನೆ ಪಡೆಯದೇ ಇದನ್ನು ತರಲು ಸಾಧ್ಯವಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ವಿಚಾರ ತಿರುಚಲು ಈ ರೀತಿ ಮಾಡುತ್ತಾರೆ ಎಂದು ಆರೋಪಿಸಿದರು.
ಕಾನೂನು ಸಚಿವರು ಇದರಲ್ಲಿ ಎಸ್ಸಿ, ಬೌದ್ಧ ಧರ್ಮ ಸೇರಿದಂತೆ ಇತರೆ ವಿಚಾರ ಬರುತ್ತದೆ ಎಂದಿದ್ದಾರೆ. ಹೀಗಾಗಿ ಅವರು ಕೊನೆ ಗಳಿಗೆಯಲ್ಲಿ ತೆಗೆದುಕೊಳ್ಳುತ್ತಾರೆ. ಅವರು ಯಾವಾಗ ಬೇಕಾದರೂ ತೆಗೆದುಕೊಳ್ಳಲಿ, ಕಾಂಗ್ರೆಸ್ ಇದನ್ನು ವಿರೋಧಿಸುತ್ತದೆ. ಸದನದ ಒಳಗೆ ಹಾಗೂ ಹೊರಗೆ ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಾನೂನು ಈಗಾಗಲೇ ಇದೆ. ಅದನ್ನು ಪಾಲಿಸುವ ಬದಲು ಈ ವಿಚಾರವನ್ನು ಚುಚ್ಚಿ, ಚುಚ್ಚಿ ಹೇಳುತ್ತಿದ್ದಾರೆ. ಬೌದ್ಧ, ಸಿಖ್, ಜೈನ್, ಕ್ರೈಸ್ತ ಧರ್ಮಗಳಿದ್ದು, ಕೇವಲ ಒಂದನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿಯವರಲ್ಲೇ ಆಂತರಿಕ ಭಿನ್ನಮತ ಇದೆ. ಇದು ರಾಜ್ಯಕ್ಕೆ ಮುಂದೆ ಬರಲಿರುವ ಬಂಡವಾಳ ಹೂಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂಬ ಲಖನ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಒಳಒಪ್ಪಂದವೋ ಅಥವಾ ಬೇರೆ ಏನೋ, ಸಿಎಂ ಏನು ಹೇಳಿದ್ದಾರೆ? ಅವರು ಕಾಂಗ್ರೆಸ್ ರೆಬಲ್ ಅಭ್ಯರ್ಥಿ ಎಂದಿದ್ದಾರೆ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ಅವರು ಬೇಕಾದರೆ ಸಂಪುಟ ವಿಸ್ತರಣೆ ವೇಳೆ ಲಖನ್ ಅವರನ್ನೇ ಸಚಿವರನ್ನಾಗಿ ಮಾಡಿಕೊಳ್ಳಲಿ ಎಂದರು.


