ಕೇಂದ್ರದಲ್ಲಿ ಬಿಜೆಪಿಗೆ ಪರ್ಯಾಯವಾಗಲು ಕಾಂಗ್ರೆಸ್ ಸಾಧ್ಯವಿಲ್ಲ. ಹಾಗಾಗಿ ಜಾತ್ಯತೀತ, ಸಮಾನ ಮನಸ್ಕ ರಾಷ್ಟ್ರೀಯ ಮೈತ್ರಿಕೂಟವನ್ನು ರಚಿಸಬೇಕಾಗಿದೆ. ಆ ಮೂಲಕ ಕೇಸರಿ ಪಕ್ಷದ ವಿರುದ್ಧ ಹೋರಾಡಲು ಪ್ರಾದೇಶಿಕ ಪಕ್ಷಗಳು ಒಂದುಗೂಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.
ದೇಶದಲ್ಲಿ ರಾಷ್ಟ್ರಪತಿ ವ್ಯವಸ್ಥೆ ಸ್ಥಾಪಿಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಗಳ ಹಿತಾಸಕ್ತಿಗಳನ್ನು ಹಾಳು ಮಾಡುವ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆಗೆ ವೇದಿಕೆ ಸಿದ್ಧಪಡಿಸುತ್ತಿದೆ. ಒಕ್ಕೂಟ ತತ್ವಗಳನ್ನು ಉಲ್ಲಂಘಿಸಿ ಮೇಲಿನಿಂದ ನಿರ್ಧಾರಗಳನ್ನು ಹೇರಲಾಗುತ್ತಿದೆ ಎಂದು ಆರೋಪಿಸಿದರು.
ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಕೋಮುವಾದಿ ತುಷ್ಟೀಕರಣ ನೀತಿ ಅನುಸರಿಸುತ್ತಿದೆ, ಕೇಂದ್ರದಲ್ಲಿ ಬಿಜೆಪಿ ಅನುಸರಿಸುತ್ತಿರುವ ಆರ್ಥಿಕ ನೀತಿಗಳ ಬಗ್ಗೆ ಕಾಂಗ್ರೆಸ್ ಕೂಡ ಒಂದೇ ನಿಲುವು ಹೊಂದಿದೆ. ಅಂತಹ ಕಾಂಗ್ರೆಸ್ ಬಿಜೆಪಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿಪಿಎಂ ಎರ್ನಾಕುಲಂ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪಿಣರಾಯಿ, ಕೋಮು ಧ್ರುವೀಕರಣ ಮತ್ತು ಹಿಂದುತ್ವ ಶಕ್ತಿಗಳ ವಿರುದ್ಧ ರಾಜಿಯಿಲ್ಲದ ನಿಲುವು ಅನುಸರಿಸುವ ಪಕ್ಷಗಳು ಮಾತ್ರ ಬಿಜೆಪಿಗೆ ಪರ್ಯಾಯವಾಗಿ ಹೊರಹೊಮ್ಮಲು ಸಾಧ್ಯ ಎಂದರು.
ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು, ಪರ್ಯಾಯವಾಗಿ ಜಾತ್ಯತೀತ ರಂಗ ಹೊರಹೊಮ್ಮಬೇಕು. ಈ ಉದ್ದೇಶ ಸಾಧಿಸಲು, ಎಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಶಕ್ತಿಗಳು ಒಗ್ಗೂಡಬೇಕು. ಇದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಬಹುದೊಡ್ಡ ಕೊಡುಗೆ ನೀಡಲಿದೆ ಮುಖ್ಯಮಂತ್ರಿ ಹೇಳಿದರು.


