ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಅಶಿಶ್ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಪತ್ರಕರ್ತರನ್ನು ನಿಂದಿಸಿದ್ದಾರೆ. ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಡಿಯೋದಲ್ಲಿ ಮಿಶ್ರಾ ಅವರನ್ನು ಜೈಲಿನಲ್ಲಿರುವ ಪುತ್ತನ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಆಗ ಸಚಿವರು ಶಾಂತಿಯನ್ನು ಕಳೆದುಕೊಂಡು ಕೋಪದಿಂದ ಉತ್ತರಿಸುವ ಜೊತೆಗೆ ‘ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಪತ್ರಕರ್ತರ ವಿರುದ್ಧ ಹರಿಹಾಯ್ದಿರುವ ವಿಡಿಯೋ ಚರ್ಚೆಗೆ ಗ್ರಾಸ ಒದಗಿಸಿಕೊಟ್ಟಿದೆ.
ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಹತ್ಯೆ ಪ್ರಕರಣದಲ್ಲಿ ಬಂಧಿತ 13 ಆರೋಪಿಗಳಲ್ಲಿ ಆಶಿಶ್ ಕೂಡ ಸೇರಿದ್ದಾರೆ. ಪತ್ರಕರ್ತರನ್ನು ನಿಂದಿಸಿರುವ ವಿಡಿಯೋವನ್ನು ಎಎನ್ಐ ಟ್ವೀಟರ್ ನಲ್ಲಿ ಹಂಚಿಕೊಂಡಿದೆ.
ಸೋಮವಾರ ಯುಪಿ ವಿಶೇಷ ತನಿಖಾ ತಂಡ 13 ಆರೋಪಿಗಳ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ನಾಲ್ಕು ಕ್ರಿಮಿನಲ್ ಮೊಕದ್ದಮೆ ಹೂಡಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಲಖಿಂಪುರ ಖೇರಿ ಹಿಂಸಾಚಾರದ ಕುರಿತು ಯುಪಿ ಪೊಲೀಸರ ವಿಶೇಷ ತನಿಖಾ ತಂಡ ಸಲ್ಲಿಸಿದ ವರದಿ ಕುರಿತು ಚರ್ಚಿಸಲು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೋಟಿಸ್ ನೀಡಿದ್ದು ಅವನ್ನು ಮುಂದೂಡಲಾಗಿದೆ. ಘಟನೆಯಲ್ಲಿ ಅಜಯ್ ಮಿಶ್ರಾ ಪುತ್ರ ಆರೋಪಿಯಾಗಿರುವುದರಿಂದ ಕೇಂದ್ರ ಸರ್ಕಾರ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.


