ಲಖಿಂಪುರಖೇರಿ ರೈತರ ಹತ್ಯಾ ಪ್ರಕರಣ ಹಿಂದೆ ಯೋಜಿತ ಪಿತೂರಿ ಇದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ಸೇರಿ 12 ಮಂದಿ ಯೋಜಿತ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಯುಪಿ ವಿಶೇಷ ಪೊಲೀಸ್ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂಬುದನ್ನು ನಿರಾಕರಿಸಿರುವ ಎಸ್‌ಐಟಿ ಕೊಲ್ಲುವ ಉದ್ದೇಶದಿಂದ ಉದ್ದೇಶಪೂರ್ವಕ ನಡೆಸಿರುವ ಕೃತ್ಯವಾಗಿದೆ ಎಂದು ಹೇಳಿದೆ.
ಲಖಿಂಪುರಖೇರಿ ಜೈಲಿನಲ್ಲಿರುವ ಆರೋಪಿಗಳ ವಿರುದ್ಧ ಕೊಲೆ ಯತ್ನ ಮತ್ತು ಇತರ ಆರೋಪ ಹೊರಿಸಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳ ಜೊತೆಗೆ ಎಲ್ಲಾ 13 ಮಂದಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3, 25 ಮತ್ತು 30 ಹಾಗೂ ಐಪಿಸಿ ಸೆಕ್ಷನ್ 307, 326, 34 ದಾಖಲಿಸಿದೆ. ಅವರ ವಿರುದ್ಧ ಅರ್ಜಿ ಸಲ್ಲಿಸಬೇಕು ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದೆ ಎಂದು ಪಿಪಿ ಯಾದವ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಐಪಿಸಿ ಸೆಕ್ಷನ್ 307 ಕೊಲೆಯ ಆರೋಪಗಳಿಗೆ ಸಂಬಂಧಿಸಿದ್ದರೆ, 326 ಸ್ವಯಂಪ್ರೇರಣೆಯಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳು ಮೂಲಕ ಗಂಭೀರ ಗಾಯ ಉಂಟುಮಾಡುವ ಉದ್ದೇಶ ಹೊಂದಿದೆ.
ಆರೋಪಿಗಳ ವಿರುದ್ಧ 279 (ಅಪವೇಗದ ಚಾಲನೆ), 338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವ ಕೃತ್ಯಗಳಿಂದ ತೀವ್ರ ನೋವನ್ನುಂಟು ಮಾಡುವುದು) ಮತ್ತು 304 ಎ (ನಿರ್ಲಕ್ಷ್ಯದಿಂದ ಸಾವು) ಸೇರಿ ಮೂರು ಐಪಿಸಿ ಸೆಕ್ಷನ್‌ಗಳನ್ನು ಕೈಬಿಡುವಂತೆ ಎಸ್‌ಐಟಿ ನ್ಯಾಯಾಲಯವನ್ನು ಕೋರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು. ಹಿಂಸಾಚಾರದಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.


