ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಯೋಜನೆ ಭರವಸೆ ನೀಡಿದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತರಾಟೆಗೆ ತೆಗೆದುಕೊಂಡು ಗೋವಾ ಜನರನ್ನು ದೇವರೇ ಕಾಪಾಡಬೇಕು ಎಂದು ಹೇಳಿದ್ದಾರೆ.
ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಮಹಿಳೆಗೆ ತಿಂಗಳಿಗೆ 5 ಸಾವಿರ ರೂಪಾಯಿ ನೇರ ವರ್ಗಾವಣೆ ಮಾಡಲಾಗುವುದು ಎಂದು ಶನಿವಾರು ಹೇಳಿದ್ದರು.
ಈ ಘೋಷಣೆಗೆ ಟ್ವೀಟಿಸಿರುವ ಕಾಂಗ್ರೆಸ್‌ನ ಗೋವಾ ಚುನಾವಣಾ ಉಸ್ತುವಾರಿ ಚಿದಂಬರಂ “ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹವಾದ ಗಣಿತ ಇಲ್ಲಿದೆ. ಗೋವಾದ 3.5 ಲಕ್ಷ ಕುಟುಂಬಗಳ ಮಹಿಳೆಗೆ 5000 ರೂ ಮಾಸಿಕ ಅನುದಾನಕ್ಕೆ ತಿಂಗಳಿಗೆ ರೂ 175 ಕೋಟಿ ವೆಚ್ಚವಾಗುತ್ತದೆ. ಅಂದರೆ ವರ್ಷಕ್ಕೆ ರೂ.2100 ಕೋಟಿ” ಎಂದು ವ್ಯಂಗ್ಯವಾಡಿದ್ದಾರೆ.
“ಮಾರ್ಚ್ 2020 ರ ಅಂತ್ಯದ ವೇಳೆಗೆ ರೂ 23,473 ಕೋಟಿಗಳಷ್ಟು ಸಾಲವನ್ನು ಹೊಂದಿರುವ ಗೋವಾ ರಾಜ್ಯಕ್ಕೆ ಇದು “ಸಣ್ಣ” ಮೊತ್ತವಾಗಿದೆ. ದೇವರು ಗೋವಾವನ್ನು ಕಾಪಾಡಲಿ! ಅಥವಾ ಗೋವಾವನ್ನು ದೇವರೇ ಉಳಿಸಬೇಕು? ”ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಪ್ರಾಯೋಜಿತ ಯೋಜನೆಯಡಿ ಕರಾವಳಿ ರಾಜ್ಯದ ಮಹಿಳೆಯರಿಗೆ ನೀಡುವ ಸಂಭಾವನೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು ಮತ್ತು ಅದರ ವ್ಯಾಪ್ತಿಗೆ ಒಳಪಡದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿತ್ತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗೋವಾದಲ್ಲಿ ಮಹಿಳೆಯರಿಗೆ ಉದ್ಯೋಗದಲ್ಲಿ ಶೇಕಡಾ 30 ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು.