ಹಿಂದೂ ಮತ್ತು ಹಿಂದುತ್ವದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ನಾನು ಹಿಂದೂವೇ ಹೊರತು ಹಿಂದುತ್ವವಾದಿಯಲ್ಲ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಮಹಂಗಾಯ್ ಹಠಾವೋ ಮಹಾ ರ್ಯಾಲಿಯಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ದೇಶದ ರಾಜಕೀಯದಲ್ಲಿ ಎರಡು ಪದಗಳ ನಡುವೆ ಘರ್ಷಣೆ ನಡೆಯುತ್ತಿದೆ. ಒಂದು ಹಿಂದೂ ಮತ್ತು ಇನ್ನೊಂದು ಹಿಂದುತ್ವ. ಇವೆರಡೂ ಒಂದೇ ವಿಷಯವಲ್ಲ. ಎರಡು ವಿಭಿನ್ನ ಪದಗಳಿವೆ ಮತ್ತು ವಿಭಿನ್ನ ಅರ್ಥಗಳಿವೆ ಎಂದು ಪ್ರತಿಪಾದಿಸಿದರು.
ನಾನು ಹಿಂದೂವೇ ಹೊರತು ಹಿಂದುತ್ವವಾದಿಯಲ್ಲ. ಹಿಂದೂ ಮತ್ತು ಹಿಂದುತ್ವವಾದಿಗಳ ನಡುವೆ ಅಪಾರ ವ್ಯತ್ಯಾಸವಿದೆ. ಹಿಂದೂ ಸತ್ಯವನ್ನು ಹುಡುಕುತ್ತದೆ, ಅದನ್ನು ಸತ್ಯಾಗ್ರಹ ಎಂದು ಕರೆಯಲಾಗುತ್ತದೆ. ಆದರೆ ಹಿಂದುತ್ವವಾದಿ ಶಕ್ತಿ (ಸತ್ತ) ಹುಡುಕುತ್ತದೆ ಮತ್ತು ಅದನ್ನು ಸತ್ತಾಗ್ರಹ ಎಂದು ಕರೆಯಲಾಗುತ್ತದೆ ಎಂದು ವ್ಯಾಖ್ಯಾನಿಸಿದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮಾತನಾಡಿ, ಬಿಜೆಪಿ ಸರ್ಕಾರ ನಾಗರಿಕರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಕೇಳುತ್ತಾರೆ. ಅವರಿಗೆ ನಾನು ಕೇಳಲು ಬಯಸುತ್ತೇನೆ. 70 ವರ್ಷಗಳ ಬಗ್ಗೆ ಮಾತು ಬಿಡಿ. ಕಳೆದ ಏಳು ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಏಮ್ಸ್, ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. 70 ವರ್ಷಳಲ್ಲಿ ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ. ಈ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಮಾತ್ರ ಕೆಲಸ ಮಾಡುತ್ತಿದೆ ಎಂದು ದೂರಿದರು.
ಸಭಿಕರನ್ನು ಪ್ರಿಯಾಂಕ ಕೇಳಿದರು. ನೀವೆಲ್ಲರೂ ಇಲ್ಲಿಗೆ ಏಕೆ ಬಂದಿದ್ದೀರಿ. ಜೀವನ ಕಷ್ಟಕರವಾಗಿದ್ದರಿಂದ ಇಲ್ಲಿಗೆ ಬಂದಿದ್ದೀರಿ ಅಲ್ಲವೆ? ಗ್ಯಾಸ್ ಬೆಲೆ 1 ಸಾವಿರ ರೂ ಆಗಿದೆ. ಸಾಸಿವೆ ಎಣ್ಣೆ 200 ರೂ, ಪೆಟ್ರೊಲ್-ಡೀಸೆಲ್ ಬೆಲೆ ಗಗನಕ್ಕೆ ಏರಿದೆ. ಜನರ ದೈನಂದಿನ ಬದುಕು ಕಷ್ಟಕರವಾಗಿದೆ. ಜನರ ಮಾತನ್ನು ಯಾರು ಕೇಳುತ್ತಿಲ್ಲ ಎಂದು ಹೇಳಿದರು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮಾತನಾಡಿ, ಏಳು ವರ್ಷಗಳ ಮೋದಿ ಸರ್ಕಾರದ ದುರಾಡಳಿತ ನಿಮ್ಮ ಮುಂದಿದೆ. ದೇಶದಲ್ಲಿ ವಿರೋಧ ಪಕ್ಷವಾಗಿ ಧ್ವನಿ ಎತ್ತಿದ್ದರೆ ಅದು ರಾಹುಲ್ ಗಾಂಧಿ ಎಂದು ಹೇಳಿದರು.