ರೈತರ ಬೇಡಿಕೆಗಳನ್ನು ಬೆಂಬಲಿಸಿಕೊಂಡು ಬರುತ್ತಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಕೃಷಿ ಉತ್ಪನ್ನಗಳಿಗೆ ಬೆಲೆ ಖಾತರಿಪಡಿಸುವ ರೈತರ ಹಕ್ಕು ಖಾಸಗಿ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಲು ಮುಂದಾಗಿದ್ದಾರೆ.
ಕೃಷಿ ಉತ್ಪನ್ನ ಖಾತರಿಪಡಿಸುವ ರೈತರ ಹಕ್ಕು ಮಸೂದೆ -2021 ಮಂಡಿಸಲು ಸಿದ್ದತೆ ನಡೆಸಿದ್ದು 22 ಬೆಳೆಗಳಿಗೆ ಕಾನೂನಾತ್ಮಕವಾಗಿ ಖಾತರಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸುವ ಗುರಿಯನ್ನು ಈ ಮಸೂದೆ ಹೊಂದಿದೆ. ಅದು ಉತ್ಪಾದನೆಯ ಸಮಗ್ರ ವೆಚ್ಚದ ಶೇ.50ರಷ್ಟು ಲಾಭಾಂಶ ನೀಡಬೇಕೆಂಬುದನ್ನು ಮಸೂದೆಯಲ್ಲಿ ಹೇಳಲಾಗಿದೆ.
ವರುಣ್ ಗಾಂಧಿ ತಮ್ಮ ಪಕ್ಷವನ್ನು ಲೆಕ್ಕಿಸದೆ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಖಾಸಗಿ ಸದಸ್ಯರ ಮಸೂದೆಯನ್ನು ಮಂಡನೆ ಮಾಡಬಹುದು. 1952 ರಿಂದ, ಇದುವರೆಗೆ ಕೇವಲ ಹನ್ನೆರಡು ಖಾಸಗಿ ಸದಸ್ಯರ ಮಸೂದೆಗಳನ್ನು ಅಂಗೀಕರಿಸಲಾಗಿದೆ.
ವಹಿವಾಟು ನಡೆಸಿದ ಎರಡು ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪಾವತಿ ಮಾಡಬೇಕು ಎಂದೂ ಉದ್ದೇಶಿತ ಖಾಸಗಿ ಮಸೂದೆ ಪ್ರಸ್ತಾಪಿಸುತ್ತದೆ.
ಈ ಮಸೂದೆಯಿಂದ ರೈತರಿಗೆ ಖಾತರಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಘೋಷಣೆಯು 93 ಮಿಲಿಯನ್ ಕೃಷಿ ಕುಟುಂಬಗಳಿಗೆ ಸುಧಾರಿತ ಕೃಷಿಗೆ ಕಾರಣವಾಗುತ್ತದೆ, ಇದು ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.


