ಗುರ್ ಗಾಂವ್ ನಲ್ಲಿ ತೆರೆದ ಜಾಗದಲ್ಲಿ ಪ್ರಾರ್ಥನೆ ಮಾಡುವುದನ್ನು ಹಲವು ಹಿಂದೂ ಸಂಘಟನೆಗಳು ವಿರೋಧಿಸಿರುವ ಹಿನ್ನೆಲೆಯಲ್ಲಿ ತೆರೆದ ಸ್ಥಳದಲ್ಲಿ ನಮಾಜ್ ಮಾಡುವುದನ್ನು ಸಹಿಲಾಗುವುದಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಬಹಿರಂಗವಾಗಿ ಪ್ರಾರ್ಥನೆ ಸಲ್ಲಿಸಲು ಕೆಲವು ಸ್ಥಳಗಳನ್ನು ಮೀಸಲಿಡುವ ಜಿಲ್ಲಾಡಳಿತದ ಹಿಂದಿನ ನಿರ್ಧಾರವನ್ನು ಹಿಂಪಡೆದಿದ್ದು, ರಾಜ್ಯ ಸರ್ಕಾರ ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದರು.
ಬಯಲು ಜಾಗದಲ್ಲಿ ನಮಾಜ್ ಮಾಡುವುದನ್ನು ಸಹಿಲಾಗುವುದಿಲ್ಲ. ಆದರೆ ನಾವು ಸೌಹಾರ್ದಯುತ ಪರಿಹಾರವನ್ನು ಹುಡುಕಲು ಪ್ರಯತ್ನಿಸುತ್ತೇವೆ. ಎಲ್ಲರಿಗೂ ಸೌಲಭ್ಯ ಸಿಗಬೇಕು. ಯಾರೂ ಇತರರ ಹಕ್ಕುಗಳನ್ನು ಉಲ್ಲಂಘಿಸಬಾರದು. ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಖಟ್ಟರ್ ಮಾಧ್ಯಮಗಳಿಗೆ ತಿಳಿಸಿದರು.
ಬಯಲು ಜಾಗದಲ್ಲಿ ನಮಾಜ್ ನಡೆಸಬಾರದು. ಇದು ಘರ್ಷಣೆಗೆ ಅವಕಾಶ ನೀಡುತ್ತದೆ. ಆದರೆ ನಾವು ಸಹ ಘರ್ಷಣೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.