ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಡಿಸೆಂಬರ್ 10ರಂದು ನಡೆದ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮಹಿಳಾ ಪ್ರತಿನಿಧಿಗಳು ಶೇ.100ರಷ್ಟು ಮತ ಚಲಾಯಿಸಿರುವುದನ್ನು ಅಂಕಿಅಂಶಗಳು ದೃಢಪಡಿಸಿವೆ. ಗುಬ್ಬಿ ತಾಲ್ಲೂಕನ್ನು ಹೊರತುಪಡಿಸಿ ಉಳಿದ 9 ತಾಲ್ಲೂಕು ಕೇಂದ್ರಗಳಲ್ಲಿ ಮಹಿಳೆಯರು 100ರಷ್ಟು ಮತ ಹಾಕಿದ್ದಾರೆ. ಗುಬ್ಬಿ ತಾಲ್ಲೂಕಿನಲ್ಲಿ ಓರ್ವ ಮಹಿಳೆ ಮತದಾನ ಮಾಡಿಲ್ಲ.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್. ರಾಜೇಂದ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರೆ, ನಿವೃತ್ತಿ ಅಧಿಕಾರಿ ಅನಿಲ್ ಕುಮಾರ್ ಜೆಡಿಎಸ್ ಅಭ್ಯರ್ಥಿ. ಬಿಜೆಪಿಯಿಂದ ಲೋಕೇಶ್ ಗೌಡ ಕಣಕ್ಕಿಳಿದಿದ್ದು ಮೂರು ಅಭ್ಯರ್ಥಿಗಳಲ್ಲಿ ಮತದಾರರು ಯಾರಿಗೆ ವಿಜಯದ ಮಾಲೆ ಹಾಕಿದ್ದಾರೆ ಎಂಬುದು ಡಿಸೆಂಬರ್ 14ರಂದು ಸಂಜೆಯ ವೇಳೆಗೆ ಗೊತ್ತಾಗಲಿದೆ.
ಮೂರು ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿಕೆ ಮಾಡಿರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಒಂದು ಪಕ್ಷ ಪ್ರತಿಯೊಬ್ಬ ಮತದಾರರಿಗೆ 30 ಸಾವಿರ ನಗದು, 11 ಸಾವಿರ ರೂಗಳ ವೋಚರ್ ನೀಡಿದ್ದರೆ, ಮತ್ತೊಂದು ಪಕ್ಷವೂ 40 ಸಾವಿರ ರೂ ನಗದು ನೀಡಿದೆ. ಮಗದೊಂದು ಪಕ್ಷ 20 ಸಾವಿರ ರೂಗಳನ್ನು ಎರಡು ಕಂತುಗಳಲ್ಲಿ ಹಂಚಿಕೆ ಮಾಡಿದೆ. ಜೊತೆಗೆ ಸಾಲ ಕೊಡಿಸುವ ಭರವಸೆಯನ್ನೂ ನೀಡಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರತೊಡಗಿವೆ.
ನಂಬಿಕಸ್ಥ ಮಹಿಳೆಯರ ಮೂಲಕ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ಹಾಗೂ ಪಾಲಿಕೆ ಸದಸ್ಯರಿಗೆ ಹಣ ಹಂಚಿಕೆ ಮಾಡಿರುವುದನ್ನು ಆಯಾ ಪಕ್ಷದ ಬೆಂಬಲಿಗರು ದೃಢಪಡಿಸುತ್ತಿದ್ದಾರೆ. ಹಣ ಹಂಚಿಕೆಯ ಪ್ರಭಾವದಿಂದಲೇ ಎಲ್ಲಾ ತಾಲ್ಲೂಕುಗಳಲ್ಲಿ ಶೇ.100ರಷ್ಟು ಮತದಾನವಾಗಲು ಕಾರಣ ಎನ್ನಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಒಟ್ಟು 5559 ಮತದಾರರಿದ್ದು, ಈ ಪೈಕಿ 5547 ಮತದಾರರು ಮತ ಚಲಾಯಿಸಿದ್ದಾರೆ. 2621 ಪುರುಷ ಮತದಾರರ ಪೈಕಿ 2610 ಮತದಾರರು ಹಕ್ಕು ಚಲಾಯಿಸಿದ್ದು ಶೇ.99.58ರಷ್ಟು ಮತದಾನವಾಗಿದೆ. 2938 ಮಹಿಳಾ ಮತದಾರರ ಪೈಕಿ 2937 ಮಹಿಳಾ ಮತದಾರರು ಮತ ಹಾಕಿದ್ದು ಶೇ.99.97ರಷ್ಟು ಮತದಾನವಾಗಿದೆ.
ವಿಶೇಷವಾಗಿ ತುಮಕೂರು ತಾಲ್ಲೂಕು ಮತ್ತು ಸಿರಾ ತಾಲ್ಲೂಕಿನಲ್ಲಿ ಶೇ.100ರಷ್ಟು ಮತದಾನವಾಗಿದೆ. ತುಮಕೂರು ತಾಲ್ಲೂಕಿನಲ್ಲಿ ಒಟ್ಟು 786 ಮತಗಳಲ್ಲಿ ಎಲ್ಲವೂ ಚಲಾವಣೆಗೊಂಡಿವೆ. ಸಿರಾ ತಾಲ್ಲೂಕಿನ 658 ಮತಗಳಲ್ಲಿ ಎಲ್ಲರೂ ಹಕ್ಕು ಚಲಾಯಿಸಿದ್ದು ತಮಗೆ ಬೇಕಾದ ಅಭ್ಯರ್ಥಿಗೆ ಪ್ರಾಶಸ್ತ್ಯದ ಮತಗಳನ್ನು ನೀಡಿದ್ದಾರೆ. ಈ ಬಾರಿಯ ಮತದಾನದಲ್ಲಿ ಹಣವೇ ಪ್ರಧಾನ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.