ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಜಾನುವಾರುಗಳನ್ನು ಕದ್ದ ಆರೋಪದ ಮೇಲೆ 50 ವರ್ಷದ ವ್ಯಕ್ತಿಯೊಬ್ಬರನ್ನು ಗುಂಪೊಂದು ಹತ್ಯೆಗೈದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ನೇಪಾಳದ ಗಡಿಯಲ್ಲಿರುವ ಪೋರ್ಬ್ಸ್ ಗಂಜ್ ಉಪವಿಭಾಗದ ಪುಲ್ಕಾಹಾ ಪೊಲೀಸ್ ಠಾಣೆ ವ್ಯಾಪ್ತಿಯ ಭವಾನಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕದ್ದ ಜಾನುವಾರುಗಳನ್ನು ಸಮೀಪದ ಕಸಾಯಿಖಾನೆಗಳೀಗೆ ಮಾರಾಟ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಗ್ರಾಮ ವಾಸಿ ಸನಿಚಾರ್ ಬರಿಯೆಟ್ ಅವರ ಎಮ್ಮೆಗಳು ಮತ್ತು ಹೋರಿಗಳನ್ನು ಕದಿಯುತ್ತಿರುವ ಕೆಲವು ವ್ಯಕ್ತಿಗಳನ್ನು ಗ್ರಾಮಸ್ಥರು ಗಮನಿಸಿದ್ದರು ಎಂದು ಹೇಳಲಾಗಿದೆ.
ಆಗ ಆರೋಪಿಗಳನ್ನು ಬೆನ್ನಟ್ಟಲು ಆರಂಭಿಸುತ್ತಿದ್ದಂತೆಯೇ ದನ ಕಳ್ಳರಲ್ಲಿ ಒಬ್ಬರು ಗ್ರಾಮಸ್ಥರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ಮಂಜು ದಟ್ಟವಾಗಿದ್ದ ಕಾರಣ ಗ್ರಾಮಸ್ಥರು ತಪ್ಪಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಕಿಯನ್ನು ಹಿಡಿದ ಜನರು ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾರೆ. ದಾಳಿಕೋರರನ್ನು ಗುರುತಿಸಲು ಗ್ರಾಮಸ್ಥರನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಸಿದ್ದಕಿಯನ್ನು ಸುಪೌಲ್ ನಿವಾಸಿ ಎಂದು ಗುರುತಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ ಎಂದು ಹೇಳಿದ್ದಾರೆ.
ಹೆಚ್ಚು ಜಾನುವಾರುಗಳನ್ನು ಕದಿಯಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರದೇಶದಿಂದ ಜಾನುವಾರು ಕಳವು ದೂರುಗಳನ್ನು ಪಡೆಯುತ್ತಲೇ ಇದ್ದೇವೆ. ಇದು ಗುಂಪಿನಿಂದ ಹತ್ಯೆಯಾಗಿದೆ ಎಂದು ಪೋರ್ಬ್ಸ್ ಗಂಜ್ ಉಪವಿಭಾಗಾಧಿಕಾರಿ ಎಲ್ಬೆಲಾ ಹೇಳಿದ್ದಾರೆ.