ಗೋವಾ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾನ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸರಣಿ ಸಭೆಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಸಿದ್ದವಾಗುತ್ತಿದ್ದಂತೆಯೇ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ರಾಜಿನಾಮೆ ಸಲ್ಲಿಸಿದ್ದು ಗೊಂದಲ ಸೃಷ್ಟಿಯಾಗಿದೆ.
ಪೊರ್ವೋರಿಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರ ಗುಂಪು ಶುಕ್ರವಾರ ಬೆಳಗ್ಗೆ ರಾಜಿನಾಮೆ ಸಲ್ಲಿಸಿದೆ. ಹೀಗಾಗಿ ಪಕ್ಷದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದು ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಕಾಂಗ್ರೆಸ್ ನಾಯಕತ್ವ ಹಿಂದೇಟು ಹಾಕುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2022ರ ವರ್ಷಾರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಗಂಭೀರವಾಗಿಲ್ಲ ಎಂದು ಪಕ್ಷೇತರ ಶಾಸಕ ರೋಹನ್ ಖೌಂಟೆ ಬೆಂಬಲಿತ ಗುಂಪು ಹೇಳಿದೆ.
ಮುಂಬರುವ ಗೋವಾ ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಆಸಕ್ತಿ ತೋರುತ್ತಿಲ್ಲ. ಪಕ್ಷದ ಕೆಲವು ನಾಯಕರ ವರ್ತನೆಯಿಂದ ಯಾವುದೇ ಚಟುವಟಿಕೆಗಳು ಆರಂಭವಾಗಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗುಪ್ತೇಶ್ ನಾಯ್ಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತೊಂದು ಕಡೆ ದಕ್ಷಿಣ ಗೋವಾದ ಪಕ್ಷದ ಹಿರಿಯ ನಾಯಕ ಮೊರೆನೊ ರೆಬೆಲೊ ರಾಜಿನಾಮೆ ನೀಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಪಕ್ಷದ ವಿರುದ್ಧ ಕೆಲಸ ಮಾಡಿದ ಕರ್ಟೋರಿಮ್ ಕ್ಷೇತ್ರದ ಹಾಲಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರಿಗೆ ಟಿಕೆಟ್ ನೀಡಿದೆ. ಇದು ರಾಜಿನಾಮೆಗೆ ಕಾರಣ ಎಂದು ರಾಜಿನಾಮೆ ಪತ್ರದಲ್ಲಿ ರೆಬೆಲೊ ಹೇಳಿದ್ದಾರೆ.
ಕಳೆದ ನಾಲ್ಕೂವರೆ ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಪಕ್ಷದ ನಾಯಕರನ್ನು ಮತ್ತು ನಿಮ್ಮನ್ನು ನಿಂದಿಸಿರುವ ಅಲೆಕ್ಸೊ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ. ಆದರೂ ಅವರಿಗೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ ಎಂದು ಮೊರೆನೊ ರೆಬೆಲೊ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.