ಮಂಗಳೂರಿನಲ್ಲಿ ಕಾನೂನು ಪದವೀಧರೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಕೆ.ಎಸ್.ಎನ್ ರಾಜೇಶ್ ಭಟ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂತ್ರಸ್ತೆ ಆರೋಪಿ ಹಿರಿಯ ವಕೀಲ ಭಟ್ ವಿರುದ್ಧ ಅಕ್ಟೋಬರ್ 18ರಂದು ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಆರೋಪಿಯ ಪತ್ನಿ ಮತ್ತು ಅಚ್ಯುತ್ ಭಟ್ ಎಂಬ ವ್ಯಕ್ತಿ ವಕೀಲ ರಾಜೇಶ್ ಭಟ್ ಅವರಿಗೆ ಸಹಕರಿಸಿದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿ ವಕೀಲರಿಗೆ ಸಹಾಯ ಮಾಡಿದ ಪತ್ನಿ ಮತ್ತು ಅಚ್ಯುತ್ ಭಟ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಕೆ.ಎಸ್.ಎನ್. ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು. ಆರೋಪಿ ವಕೀಲರಿಗೆ ಜಾಮೀನು ನೀಡಬಾರದು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಹೀಗಾಗಿ ನ್ಯಾಯಾಲಯ ಆತನ ವಿರುದ್ಧ ಬಂಧನ ಆದೇಶವನ್ನು ಹೊರಡಿಸಿದೆ.
ಆರೋಪಿ ವಕೀಲರನ್ನು ಇದುವರೆಗೂ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಬೇರೆ ದೇಶಕ್ಕೆ ಪರಾರಿಯಾಗದಂತೆ ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದಾರೆ. ಅವರ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ವವ್ಯಲೋಪವೆಸಗಿದ್ದಕ್ಕಾಗಿ ಮಹಿಳಾ ಸಬ್ ಇನ್ ಸ್ಪೆಕ್ಟರ್ ಸೇರಿ ಇಬ್ಬರು ಪೊಲೀಸ್ ಅಧಿಕಾರಿಳನ್ನು ಅಮಾನತುಗೊಳಿಸಲಾಗಿದೆ.