ನಾಸಿಕ್ ನ ತ್ರಯಂಬಕೇಶ್ವರ ದೇವಾಲಯದಲ್ಲಿ ವಿಶೇಷ ಆಚರಣೆಗಳನ್ನು ನಡೆಸುವ ಬಗ್ಗೆ ಅರ್ಚಕರ ನಡುವೆ ಜಗಳ ನಡೆದಿದ್ದು ಅವರ ಬಳಿ ಪಿಸ್ತೂಲ್ ಕಂಡು ಬಂದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಏಳು ಮಂದಿ ಅರ್ಚಕರನ್ನು ಬಂಧಿಸಲಾಗಿದೆ.
ದೇವಾಲಯದಲ್ಲಿ ವಿಶೇಷ ಆಚರಣೆಗಳನ್ನು ನಡೆಸುವ ಬಗ್ಗೆ ಅರ್ಚಕರು ಪರಸ್ಪರ ಜಗಳವಾಡುತ್ತಿದ್ದರು. ಆಗ ಗಸ್ತಿನಲ್ಲಿದ್ದ ಪೊಲೀಸರು ಜಗಳವನ್ನು ತಡೆಯಲು ಮಧ್ಯಪ್ರವೇಶಿಸಿದರು.
ಪೊಲೀಸರು ಅರ್ಚಕರ ವಾಹನವನ್ನು ತಪಾಸಣೆ ನಡೆಸಿದಾಗ, ಹಾಕಿ ಸ್ಟಿಕ್, 11 ಸಜೀವ ಗುಂಡುಗಳು, ಕಂಟ್ರಿ ಪಿಸ್ತೂಲ್, ಕುಡುಗೋಲು, ಚಾಕು ಮೊದಲಾದ ಹರಿತವಾದ ಆಯುಧಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲೆ ಏಳು ಮಂದಿ ಅರ್ಚಕರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ನಾಸಿಕ್ ನಗರದ ಪಂಚವಟಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರವಾಡಿ ರಸ್ತೆಯಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಸ್ತು ತಿರುಗುತ್ತಿದ್ದ ಪೊಲೀಸರು ಅರ್ಚಕರು ಹೊಡೆದಾಡುತ್ತಿದ್ದುದನ್ನು ಕಂಡು ಸ್ಥಳಕ್ಕೆ ಹೋಗಿ ಜಗಳ ಬಿಡಿಸಿದರು ಎಂದು ತಿಳಿದುಬಂದಿದೆ.
ಅರ್ಚಕರು ಮಧ್ಯಪ್ರದೇಶದಿಂದ ಬಂದವರು ಮತ್ತು ಪರಸ್ಪರ ಪರಿಚಿತರು. ಅವರೆಲ್ಲರೂ ಹಿರವಾಡಿಯಲ್ಲಿ ವಾಸಿಸುತ್ತಿದ್ದು ಆಸ್ತಿಯನ್ನು ಹೊಂದಿದ್ದಾರೆ. ಅರ್ಚಕರ ವೃತ್ತಿಯಲ್ಲಿ ಪೈಪೋಟಿ ಉಂಟಾದ ಹಿನ್ನೆಲೆಯಲ್ಲಿ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಚಕರು ಮಾರಕಾಸ್ತ್ರಗಳನ್ನು ಹೊಂದಿದ್ದರಿಂದ ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದೆವು. ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ವೀರೇಂದ್ರ ತ್ರಿವೇದಿ, ಅಶಿಶ್ ತ್ರಿವೇದಿ, ಮನೀಶ್ ತ್ರಿವೇದಿ, ಸುನಿಲ್ ತಿವಾರಿ, ಆಕಾಶ ತ್ರಿಪಾಠಿ, ಅನಿಕೇತ್ ತಿವಾರಿ ಮತ್ತು ಸಚಿನ್ ಪಾಂಡೆ ಎಂದು ಗುರುತಿಸಲಾಗಿದೆ.