ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರತಿಪಕ್ಷ ನಾಯಕರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಅಧಿವೇಶನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಹೇಳಿಕೆ ಮುಗಿಸಿದ ನಂತರ, ಇತರ ನಾಯಕರು ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಸಭಾಪತಿ ಅವಕಾಶ ನೀಡಲಿಲ್ಲ ಎಂದು ದೂರಿದರು.
“ನಾನು ಪ್ರತಿಪಕ್ಷ ನಾಯಕನಾಗಿ ಮತ್ತು ಇತರ ಪಕ್ಷಗಳ ಪ್ರತಿನಿಧಿಯಾಗಿ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಯಸಿದ್ದೆ. ನಾವು ಎರಡು ನಿಮಿಷಗಳ ಕಾಲ ಕೇಳಿದೆವು. ಆದರೆ ಆ ಸಮಯವನ್ನೂ ನೀಡಲಿಲ್ಲ” ಎಂದು ಟೀಕಿಸಿದರು.
ದೇಶದಲ್ಲಿ ಯಾವ ರೀತಿಯ ಪ್ರಜಾಪ್ರಭುತ್ವವನ್ನು ನಡೆಸಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇದನ್ನು ನಾವು ಖಂಡಿಸುತ್ತೇವೆ. ಅಪಘಾತದಲ್ಲಿ ಮಡಿದ ಸೇನಾ ಅಧಿಕಾರಿಗಳು ಮತ್ತು ಯೋಧರಿಗೆ ಗೌರವ ಸಲ್ಲಿಸಲು ಧರಣಿಯನ್ನು ಹಿಂಪಡೆದಿದ್ದೇವೆ ಎಂದರು.
ಹುತಾತ್ಮರಿಗೆ ನಮನ ಸಲ್ಲಿಸಲು ನಮಗೆ ಅವಕಾಶ ನೀಡದಿರುವುದು ದುರದೃಷ್ಟಕರ. ಸಭಾಪತಿ ಅವಕಾಶ ನೀಡದಿರುವುದನ್ನು ಖಂಡಿಸುತ್ತೇವೆ. ರಾಜಕೀಯ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಯೋಧರು ಹುತಾತ್ಮರಾಗಿದ್ದರೂ ನಮಗೆ ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ನೀಡಲಿಲ್ಲ. ಸರ್ಕಾರ ಬುದ್ದಿ ಬರಲಿ, ಕುಟುಂಬ ಸದಸ್ಯರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.