ದೆಹಲಿ ಗಡಿಗಳಲ್ಲಿ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆ ಕೊನೆಗೂ ಅಂತ್ಯವಾಗಿದೆ. ಗೃಹ ಸಚಿವಾಲಯದ ತಿದ್ದುಪಡಿ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ಹಿಂಪಡೆಯಲು ತೀರ್ಮಾನಿಸಿದೆ. ಹಾಗಾಗಿ ಶನಿವಾರದಿಂದ ರೈತರು ಪ್ರತಿಭಟನಾ ಸ್ಥಳದಿಂದ ಮನೆಗೆ ಮರಳು ಆರಂಭಿಸಲಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಬೇಷರತ್ತಾಗಿ ವಾಪಸ್ ಪಡೆಯಲು ಸರ್ಕಾರ ಸಮ್ಮತಿ ನೀಡಿರುವ ಪತ್ರವನ್ನು ಔಪಚಾರಿಕವಾಗಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಹಿಂಪಡೆಯುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಜೋಗಿಂದರ್ ಉಗ್ರನ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆಯ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 11 ರಂದು ದೇಶಾದ್ಯಂತ ಎಲ್ಲಾ ಗಡಿಗಳು, ಟೋಲ್ ಪ್ಲಾಜಾಗಳು ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ವಿಜಯ ದಿನ ಆಚರಿಸಲಾಗುವುದು, ನಂತರ ಪ್ರತಿಭಟನಾಕಾರರು ಹಿಂತಿರುಗುತ್ತಾರೆ ಎಂದು ಎಸ್‌ಕೆಎಂ ಹೇಳಿದೆ.
“ನಾವು ವಿಜಯ ದಿನವನ್ನು ನಾಳೆ ಆಚರಿಸಲು ಬಯಸಿದ್ದೆವು. ಆದರೆ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಈ ದೃಷ್ಟಿಯಿಂದ ಅದನ್ನು ಡಿಸೆಂಬರ್ 11 ಕ್ಕೆ ಮುಂದೂಡಿದ್ದೇವೆ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಎಸ್‌ಕೆಎಂ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್, “ಆಂದೋಲನವನ್ನು ಅಮಾನತುಗೊಳಿಸಲಾಗಿದೆ. ಸರ್ಕಾರವು ಒಪ್ಪಿಗೆ ಸೂಚಿಸಿದ ಪ್ರಸ್ತಾವನೆಗಳನ್ನು ಜಾರಿಗೊಳಿಸಿದರೆ ಪರಿಶೀಲಿಸಲು ಒಕ್ಕೂಟಗಳು ಜನವರಿ 15 ರಂದು ಸಭೆ ಸೇರುತ್ತವೆ ಎಂದು ಹೇಳಿದರು. ಸಹಿ ಮಾಡಿದ ಪತ್ರವನ್ನು ಈಗ ಎಸ್‌ಕೆಎಂ ಸಭೆಯಲ್ಲಿ ರೈತ ಸಂಘಗಳ ಮುಂದೆ ಇಡಲಾಗುವುದು ಎಂದರು.