ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದ ಕೊಠಡಿ ಸಂಖ್ಯೆ 102ರಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು ಕಾನ್ ಸ್ಟೆಬಲ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಫೋಟದ ಪರಿಣಾಮ ನ್ಯಾಯಾಲಯದ ಮಹಡಿಯ ಒಂದು ಭಾಗ ಸ್ವಲ್ಪಮಟ್ಟಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ನಿಖರವಾದ ಕಾರಣವನ್ನು ಕಂಡುಹಿಡಿಯಲು ನಾವು ಎಫ್.ಎಸ್.ಎಲ್ ತಜ್ಞರನ್ನು ಕರೆದಿದ್ದು ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಪ್ರಣವ್ ತಯಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ರೋಹಿಣಿ ನ್ಯಾಯಾಲಯದ ಒಳಗೆ ಸ್ಫೋಟ ಸಂಭವಿಸಿದೆ ಎಂದು ಬೆಳಗ್ಗೆ 10.40ರ ಸುಮಾರಿಗೆ ಕರೆ ಬಂತು. ನಾವು ತಕ್ಷಣವೇ ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳಿಸಿದ್ದೇವೆ. ಬೆಳಗ್ಗೆ 11.10ರ ಸುಮಾರಿಗೆ ನಮ್ಮ ರಕ್ಷಣಾ ತಂಡ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆಂದು ತಿಳಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕೊಠಡಿ ಸಂಖ್ಯೆ 102ರ ಒಳಗೆ ಟ್ರಾಫಿಕ್ ಸಂಬಂಧಿತ ಪ್ರಕರಣಗಳನ್ನು ಪರಿಹರಿಸುವ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಏನೋ ಇತ್ತು ಮತ್ತು ಅದು ನ್ಯಾಯಾಲಯದ ಒಳಗೆ ಸ್ಫೋಟಗೊಂಡಿದೆ. ಸ್ಫೋಟದ ಶಬ್ದ ಜೋರಾಗಿ ಕೇಳಿಬಂತು. ಇದರಿಂದ ನೆಲದಲ್ಲಿ ಗುದ್ರ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಾಯಗೊಂಡಿರುವ ಸಿಬ್ಬಂದಿಯನ್ನು ಸುಲ್ತಾನ್ ಪುರಿ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ರಾಜೀವ್ ಕುಮಾರ್ ಎಂದು ಗುರುತಿಸಲಾಗಿದೆ. ಅವರನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದೇ ನ್ಯಾಯಾಲಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ದರೋಡೆಕೋರ ಜಿತೇಂದ್ರ ಮಾನ್ ಅಲಿಯಾಸ್ ಗೋಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.


