ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸಂಚಲನ ಆರಂಭವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಹಲವು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಮನೋಹರ್ ಅವರು ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದರು.
ಮನೋಹರ್ ಕೇವಲ ಕೋಲಾರ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು ನಗರದಲ್ಲೂ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಆರು ವರ್ಷಗಳಿಂದ ಕೋಲಾರ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಮಾಲೂರು ನಾಗರಾಜ್ ಹೆಚ್ಚು ಹೆಸರು ಮಾಡಿದವರು. 15 ವರ್ಷ ಜಿಲ್ಲಾ ಅಧ್ಯಕ್ಷರಾಗಿ 3 ಬಾರಿ ಶಾಸಕರಾಗಿ ಕೆಲಸ ಮಾಡಿದವರು. ಅವರು ಬಿಜೆಪಿಗೆ ಸೇರಿದ್ದರು. ಆದರೆ ಎಲ್ಲ ವರ್ಗದ ಜನರ ರಕ್ಷಣೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಮನವರಿಕೆ ಆಗಿ ಮತ್ತೆ ಪಕ್ಷಕ್ಕೆ ಹಿಂತಿರುಗಿದ್ದಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗದ ಪ್ರಮುಖ ನೇತಾರ ಗೋಪಿಕೃಷ್ಣ ತರಿಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಡಿಮೆ ಅಂತರದಲ್ಲಿ ಪರಾಭವಗೊಂಡವರು. ಮಡಿವಾಳ ಸಮುದಾಯದ ನಾಯಕರು. ಅಮರನಾಥ್ ನಮ್ಮ ಜತೆ ಕೆಲಸ ಮಾಡಿದವರು. ರಾಜ್ಯ ಒಬಿಸಿ ಘಟಕದ ಅಧ್ಯಕ್ಷರು. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿದ್ದಾರೆ. ನಂಜಪ್ಪ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದಾರೆ. ಮಡಿವಾಳರ ಸಂಘದ ರಾಜ್ಯ ಅಧ್ಯಕ್ಷರು ಎಂದು ಎಲ್ಲರನ್ನು ಪರಿಚಯಿಸಿದರು.
ಮಳಬಾಗಿಲಿನ ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರಪ್ಪ, ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟಪ್ಪ, ಮಂಡ್ಯದ ಜಿಲ್ಲಾ ಪಂಚಾಯಿತಿ ಪ್ರಮುಖ ಡಾ. ಕೃಷ್ಣ, ಹೆಚ್ಎಎಲ್ ಕಾರ್ಮಿಕ ಮುಖಂಡ ದೇವರಾಜ್, ಶ್ರೀರಂಗಪಟ್ಟಣದ ರಾಜು ಸೇರಿ ಹಲವು ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


