ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಟವಾಡಿ ಮನೆಗೆ ತೆರಳುತ್ತಿದ್ದ ಮುಸ್ಲಿಮ ಯುವಕನ ಮೇಲೆ ಭಜರಂಗ ದಳ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಡಿಸೆಂಬರ್ 1ರಂದು ಹಲ್ಲೆಗೊಳಗಾದ ಸಮೀರ್ ಪಾಷ ಪೊಲೀಸರಿಗೆ ದೂರು ನೀಡಿದ್ದಾನೆ.
ನವೆಂಬರ್ 27ರಂದು ಮಧ್ಯಾಹ್ನ 2.30ರ ವೇಳೆ ಕಾಲೇಜು ಮೈದಾನದಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟ್ ಮತ್ತು ಕಬ್ಬಡಿ ಆಟವಾಡಲು ಬಂದಿದ್ದ ಸಮೀರ್ ಪಾಷ ಆಟ ಮುಗಿಸಿ ಮನೆಗೆ ತೆರಳುತ್ತಿದ್ದಾಗ 10-12 ಮಂದಿ ಆತನನ್ನು ಸುತ್ತುವರೆದು ಹೆಸರು, ವಿಳಾಸ ಕೇಳಿದರು ಎಂದು ಹೇಳಲಾಗಿದೆ. ದೂರಿನ ಪ್ರತಿ ದಿ ನ್ಯೂಸ್ ಕಿಟ್ ಗೆ ಲಭ್ಯವಾಗಿದೆ.
ಸಮೀರ್ ಪಾಷ ಹೆಸರು ಕೇಳುತ್ತಿದ್ದಂತೆಯೇ ಆ ಗುಂಪು ನೀವು ಮುಸ್ಲೀಮರು, ಇಲ್ಲಿಗೆ ಬರಬಾರದು, ಪಾಕಿಸ್ತಾನಕ್ಕೆ ಹೋಗಿ ಬೋಸು ಮಕ್ಕಳೇ ಎಂದು ಕಾಲಿನಿಂದ ಎದೆಗೆ, ಮರ್ಮಾಂಗಕ್ಕೆ ಒದ್ದರು. ದೊಣ್ಣೆಯಿಂದ ಹೊಡೆದರು. ನೋವು ಸಹಿಸಲಾರದೆ ಅಳುತ್ತಾ ಹೊಡೆಯದಂತೆ ಮನವಿ ಮಾಡಿದೆ. ಆದರೂ ಹಲ್ಲೆ ಮಾಡಿದರು ಎಂದು ಸಮೀರ್ ಪಾಷ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ನಂತರ ಕಾಲೇಜು ಪ್ರಿನ್ಸಿಪಾಲರ ಬಳಿ ಕರೆದುಕೊಂಡು ಹೋದ ಗುಂಪು, ಇವನು ನಿಮ್ಮ ಕಾಲೇಜು ವಿದ್ಯಾರ್ಥಿಯೇ? ಎಂದು ಪ್ರಶ್ನಿಸಿದೆ. ಆಗ ಪ್ರಿನ್ಸಿಪಾಲರು “ನಾನು ಹೊಸಬ, ಈ ವಿದ್ಯಾರ್ಥಿ ನನಗೆ ಗೊತ್ತಿಲ್ಲ ಎಂದು ಹೇಳಿದ ನಂತರ ಯುವಕನನ್ನು ಹೊರ ಕರೆತಂದ ಗುಂಪು ನಾವು ಭಜರಂಗ ದಳ ಕಾರ್ಯಕರ್ತರು, ಮಂಜು ಭಾರ್ಗವನ ಕಡೆಯವರು. ಇನ್ನೊಮ್ಮೆ ಕಾಣಿಸಿದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಹೇಳಿದೆ.
ನಾನು ಇದೇ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿದರೂ ಕೇಳಲಿಲ್ಲ. ಸ್ನೇಹಿತ ದಾವುದ್ ನನ್ನನ್ನು ರಕ್ಷಿಸಲು ಬಂದ. ಅವನ ಮೇಲೂ ಭಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದರು. ಮರ್ಮಾಂಗಕ್ಕೆ ಒದ್ದ ಕಾರಣ ತೀವ್ರತರ ನೋವು ಇತ್ತು. ಮನೆಗೆ ಹೋದೆ. ನೋವು ತಡೆಯಲಾರದೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹಲ್ಲೆಗೊಳಗಾದ ಯುವಕ ಸಮೀರ್ ಪಾಷ ಹೇಳಿದ್ದಾನೆ.
ಗಾಂಜಾ ಮಾರಾಟದ ಕಟ್ಟುಕಥೆ: ಸಮೀರ್ ಪಾಷ, ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಹಲ್ಲೆಕೋರರ ವಿರುದ್ಧ ದೂರು ನೀಡಲು ಹೋದಾಗ ಪೊಲೀಸರು ‘ನೀನು ಗಾಂಜಾ ಮಾರಾಟ ಮಾಡಿರುವ ಮಾಹಿತಿ ಇದೆ ಎಂದು ಹಲ್ಲೆಗೊಳಗಾದ ಯುವಕನನ್ನೇ ಬೆದರಿಸಿ ಎಫ್ಐಆರ್ ದಾಖಲಿಸದೆ ಕಳಿಸಿದರೆಂದು ಹೇಳಲಾಗಿದೆ.