ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು ಕರ್ನಾಟಕದಿಂದ ಗುಜರಾತ್ ಗೆ ಸ್ಥಳಾಂತರಿಸುವ ಪ್ರಸ್ತಾವನೆ ವಿರುದ್ಧ ಎನ್.ಎಸ್.ಯು.ಐ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಇಸ್ರೋ ಖಾಸಗೀಕರಣಗೊಳಿಸುವ ನಿರ್ಧಾರವನ್ನು ಕೈಬಿಡಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನ್ಯೂ ಬಿಇಎಲ್ ರಸ್ತೆಯ ಇಸ್ರೋ ಸಂಸ್ಥೆ ಎದಿರು ಸಮಾವೇಶಗೊಂಡ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕೃಷ್ಣಬೈರೇಗೌಡ, ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಮುಖಂಡರಾದ ಹನುಮಂತೇಗೌಡ, ಜಯಸಿಂಹ ಭಾಗವಹಿಸಿ ಇಸ್ರೋ ಯೋಜನೆಯ ಸ್ಥಳಾಂತರವನ್ನು ಕೈಬಿಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಸ್ರೋ ಮಾನವ ಸಹಿತ ಗಗನಯಾನ ಯೋಜನೆಯನ್ನು ಗುಜರಾತ್ ಗೆ ಸ್ಥಳಾಂತರಿಸಲು ನಿರ್ಧರಿಸಿದ್ದು ಇದನ್ನು ಕೈಬಿಡುವಂತೆ ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ. ಸ್ಥಳಾಂತರವಾದರೆ ರಾಜ್ಯದ ಮಾನ ಹರಾಜಾಗಲಿದೆ. ಹೀಗಾಗಿ ರಾಜ್ಯದ 25 ಮಂದಿ ಸಂಸದರು ಮುಖ್ಯಮಂತ್ರಿ ಜೊತೆ ನಿಯೋಗದಲ್ಲಿ ತೆರಳಿ ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾರತದಲ್ಲಿ ಎಲ್ಲಿ ಕೆಲಸ ಮಾಡಿದರೂ ಒಂದೇ ಎಂದು ಹೇಳಿದ್ದಾರೆ. ಇದು ಕೇವಲ ರಾಜಕೀಯದ ಹೇಳಿಕೆ. ಇಸ್ರೋದಲ್ಲಿ 15 ಸಾವಿರ ನೌಕರರು ಇದ್ದಾರೆ. ಇಸ್ರೋ ಯೋಜನೆಯನ್ನು ಸ್ಥಳಾಂತರಿಸುವ ಕುರಿತು ಆಂತರಿಕ ಮಾಹಿತಿ ಇದೆ. ಮನುಷ್ಯನಿಗೆ ಹೃದಯ ಇದ್ದಂತೆ ಕರ್ನಾಟಕಕ್ಕೆ ಇಸ್ರೋ. ಹಾಗಾಗಿ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ಹೇಳಿದರು.
ಇಸ್ರೋ ಪರವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ. ಇಸ್ರೋವನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆ. ಯುವಕರು, ವಿಜ್ಞಾನಿಗಳು ಇಸ್ರೋ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡಿದ್ದಾರೆ. ಇಸ್ರೋ ಪರ ಹೋರಾಟ ಮಾಡಿದರೆ ಪೊಲೀಸರು ಧಮಕಿ ಹಾಕುತ್ತಾರೆ. ಬೇಕಾದರೆ ಬಂಧಿಸಲಿ, ದೇಶ ಮತ್ತು ರಾಜ್ಯದ ಹಿತಕ್ಕೋಸ್ಕರ, ರಾಜ್ಯದ ಗೌರವ ಮತ್ತು ಸ್ವಾಭಿಮಾನ ಕಾಪಾಡಲು ಹೋರಾಟ ಅನಿವಾರ್ಯ ಎಂದರು.