ಸಂಯುಕ್ತ ಕಿಸಾನ್ ಮೋರ್ಚಾ ನವೆಂಬರ್ 29ರಂದು ಸಂಸತ್ತಿಗೆ ಹಮ್ಮಿಕೊಂಡಿದ್ದ ಉದ್ದೇಶಿತ ರ್ಯಾಲಿಯನ್ನು ಅಮಾನತು ಮಾಡಲಾಗಿದೆ ಎಂದು ರೈತ ಮುಖಂಡ ದರ್ಶನ್ ಪಾಲ್ ಸಿಂಗ್ ಹೇಳಿದ್ದಾರೆ.
ಸಿಂಘು ಗಡಿಯಲ್ಲಿ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ಘೋಷಿಸಿರುವುದರಿಂದ ಟ್ರ್ಯಾಕ್ಟರ್ ಮೆರವಣಿಗೆಯನ್ನು ಸದ್ಯಕ್ಕೆ ಮುಂದೂಡಬೇಕೆಂದು ಹಲವು ಒಕ್ಕೂಟಗಳು ಅಭಿಪ್ರಾಯ ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನವೆಂಬರ್ 29 ರಿಂದ ಚಳಿಗಾಲದ ಅಧಿವೇಶನದಲ್ಲಿ ಪ್ರತಿದಿನ 500 ರೈತರು ಸಂಸತ್ತಿಗೆ ಶಾಂತಿಯುತ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್.ಕೆ.ಎಂ ಘೋಷಿಸಿತ್ತು.
ಹಠಮಾರಿ ಮತ್ತು ಸಂವೇದನಾರಹಿತ ಜನವಿರೋಧಿ ಮತ್ತು ಕಾರ್ಪೋರೇಟ್ ಪರವಾದ ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ಹೇಳಲಾಗಿತ್ತು.
ಈಗ ನವೆಂಬರ್ 29ರ ಟ್ರ್ಯಾಕ್ಟರ್ ಮೆರವಣಿಗೆಯನ್ನು ಅಮಾನತು ಮಾಡಲಾಗಿದೆ ಎಂದು ದರ್ಶನ್ ಪಾಲ್ ಸಿಂಗ್ ಹೇಳಿದ್ದಾರೆ.
ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸರ್ಕಾರದ ಕ್ರಮವನ್ನು ರೈತ ಸಂಘಗಳು ಸ್ವಾಗತಿಸಿದ್ದರೂ ಕಾನೂನುಗಳನ್ನು ಸಂಪೂರ್ಣವಾಗಿ ಮತ್ತು ಔಪಚಾರಿಕವಾಗಿ ಹಿಂತೆಗೆದುಕೊಳ್ಳುವವರೆಗೆ , ಕನಿಷ್ಟ ಬೆಂಬಲ ಬೆಲೆ ಖಾತ್ರಿಗೊಳಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಅವರು ಹೇಳಿದರು.