ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಕಾರ್ಪೋರೇಷನ್ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ತೆಗೆದುಕೊಳ್ಳಲಾಗುತ್ತದೆ ಎಂದು ಗುತ್ತಿಗೆದಾರರು ಆರೋಪಿಸಿರುವುದರಿಂದ ತನಿಖೆ ನಡೆಸಲು ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಸಮಿತಿ ರಚನೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕಾಂಗ್ರೆಸ್ ಪಕ್ಷ ರಾಜ್ಯಪಾಲರಿಗೆ ದೂರು ನೀಡಿದೆ. ಭಾರೀ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಸರ್ಕಾರವನ್ನು ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಅದನ್ನು ಮಾಡದಿದ್ದರೆ ರಾಜ್ಯ ಸರ್ಕಾರ ಸದನ ಸಮಿತಿ ರಚನೆ ಮಾಡಲಿ. ಸಮಿತಿಗೆ ಅಧ್ಯಕ್ಷರನ್ನು ಅವರದೇ ಪಕ್ಷದ ಶಾಸಕರನ್ನು ಮಾಡಲಿ. ನಾವು ತನಿಖೆ ಹೇಗೆ ನಡೆಯಬೇಕು ಎಂದು ಸಲಹೆ ನೀಡುತ್ತೇವೆ ಎಂದರು.
ಕೇವಲ ಬಿಜೆಪಿ ಅವಧಿಯಲ್ಲಾಗಿರುವ ಭ್ರಷ್ಟಾಚಾರದ ಬಗ್ಗೆ ಮಾತ್ರವಲ್ಲ, ಕಾಂಗ್ರೆಸ್, ಜೆಡಿಎಸ್ ಸರ್ಕಾರದ ಅವಧಿಯಲ್ಲಾಗಿರುವ ಭ್ರಷ್ಟಾಚಾರದ ತನಿಖೆಯೂ ನಡೆಯಲಿ. ತಪ್ಪಿತಸ್ಥರು ಯಾರೆಂಬುದು ಗೊತ್ತಾಗಲಿ, ಎಲ್ಲರಿಗೂ ಶಿಕ್ಷೆಯಾಗಲಿ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ತನಿಖೆ ನಡೆಸಲು ನೇಮಕ ಮಾಡಿದ್ದಾರೆ. ಇದರಿಂದ ಪ್ರಯೋಜನವೇನೂ ಇಲ್ಲ ಎಂದು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಮತ್ತು ಸದನ ಸಮಿತಿ ರಚಿಸುವಂತೆ ಸದನದ ಒಳಗೆ ಹೋರಾಟ ಮಾಡುತ್ತೇವೆ. ಸರ್ಕಾರವನ್ನು ವಜಾ ಮಾಡಲು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ ಮೇಲೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಜೆಪಿಯವರು ನಮ್ಮ ಬೆಂಬಲ ಕೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರ ಪಾರ್ಟಿ, ಅವರ ತತ್ವ, ಅವರ ಸಿದ್ಧಾಂತ. ಯಾರ ಕೈಲಿ ವೋಟು ಹಾಕಿಸಿಕೊಳ್ಳಬೇಕು. ಯಾರಿಗೆ ಹಾಕಿಸಬೇಕು ಎಂಬುದು ಅವರಿಗೆ ಬಿಟ್ಟದ್ದು. ಕೆಲವೊಮ್ಮೆ ಫ್ರೆಂಡ್ಲಿ ಫೈಟ್ ನಡೀತದೆ ಎಂದು ಹೇಳಿದರು.
ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳನ್ನು ಹಾಕಿದ್ದೇವೆ. ನಾವು ಎಲ್ಲ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ನಮ್ಮ ಶಕ್ತಿ ಮೇಲೆ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಹೆಚ್ಚು ಸಂಖ್ಯೆ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತೇನೆ ಎಂದರು.