ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದ ಮೇಘಾಲಯದ 17 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಟಿಎಂಸಿ ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನವನ್ನು ಕಳೆದುಕೊಳ್ಳಲಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಂಗ್ಮಾ ಆಗಸ್ಟ್ ನಿಂದ ಅಸಮಾಧಾನಗೊಂಡಿದ್ದರು. ಕೇಂದ್ರ ನಾಯಕತ್ವವು ಸೆಲೆಸ್ಟೀನ್ ಲಿಂಗ್ಡೋಹ್ ಅವರ ಬದಲಿಗೆ ಶಿಲ್ಲಾಂಗ್ ಸಂಸದ ವಿನ್ಸೆಂಟ್ ಪಾಲ್ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಸಂಗ್ಮಾ ಮತ್ತು ಗರೋ ಹಿಲ್ಸ್ ನ ಪರ ಶಾಸಕರು ಹೊಸ ಅಧ್ಯಕ್ಷರನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.
ಈ ನಡುವೆ ಅಕ್ಟೋಬರ್ ನಲ್ಲಿ ಸಂಗ್ಮಾ ಅವರು ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರನ್ನು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಗುವಾಹಟಿಯಲ್ಲಿ ಭೇಟಿ ಮಾಡಿದ್ದರು. ಇದಾದ ನಂತರ ಕಾಂಗ್ರೆಸ್ ಸಂಗ್ಮಾ ಸೇರಿದಂತೆ ಮೇಘಾಲಯದ ನಾಯಕರನ್ನು ದೆಹಲಿಗೆ ಕರೆಸಿ ಚರ್ಚಿಸಿದ್ದರು.
ಪಕ್ಷವು ಅವರನ್ನು ಈಶಾನ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರೂ ಸಂಗ್ಮಾ ಕೆಲ ಕಾಲದಿಂದ ಪಕ್ಷ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ತೃಣಮೂಲ ಕಾಂಗ್ರೆಸ್ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಳೆದ ಎರಡು ತಿಂಗಳಿನಿಂದ ಶಿಲ್ಲಾಂಗ್ ನಲ್ಲಿ ಮೊಕ್ಕಾಂ ಹೂಡಿ ಶಾಸಕರ ಮನವೊಲಿಸಲು ಪ್ರಯತ್ನಿಸಿದ್ದರು. ಅದರಲ್ಲಿ ಯಶಸ್ವಿಯೂ ಆಗಿ 3/1ಕ್ಕೂ ಹೆಚ್ಚು ಸಂಖ್ಯೆಯ ಶಾಸಕರು ಟಿಎಂಸಿ ಸೇರುವಂತೆ ನೋಡಿಕೊಂಡರು.
ಇನ್ನೊಂದೆಡೆ ಅರುಣಾಚಲ ಪ್ರದೇಶದಲ್ಲಿ ಸಿಎಂ ಪೆಮಾ ಖಂಡು ಸೇರಿ ಆಗಿನ 44 ಕಾಂಗ್ರೆಸ್ ಶಾಸಕರಲ್ಲಿ 43 ಮಂದಿ ಸೆಪ್ಟೆಂಬರ್ 2016ರಲ್ಲಿ ಕಾಂಗ್ರೆಸ್ ತೊರೆದು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಕ್ಕೆ ಸೇರಿ ಅಧಿಕಾರದಲ್ಲಿ ಮುಂದುವರಿದಿದ್ದರು. ನಂತರ ಖಂಡು ಮತ್ತು ಹೆಚ್ಚಿನ ಸಂಖ್ಯೆಯ ಶಾಸಕರು ಬಿಜೆಪಿ ಸೇರಿದ್ದರು.
ಹೀಗಾಗಿ ಅರುಣಾಚಲದಲ್ಲಿ ಬಿಜೆಪಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಆಡಳಿತ ಪಕ್ಷವಾಯಿತು. ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್ ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಎರಡು ರಾಜ್ಯಗಳಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ.


