ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಒಮ್ಮತ ಮೂಡಿಸಲು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಸೋಮವಾರ ಪ್ರತಿಪಕ್ಷಗಳ ಸಭೆಯನ್ನು ಕರೆದಿದ್ದಾರೆ.
ಮುಂಬರುವ ಅಧಿವೇಶನದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ನವೆಂಬರ 29ರಂದು ಬೆಳಗ್ಗೆ 9.45ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಎಲ್ಲಾ ಪ್ರತಿಪಕ್ಷಗಳ ಸಭೆ ಕರೆಯಲಾಗಿವೆ. ಸಂಸತ್ತಿನಲ್ಲಿ ನಾವು ಪ್ರಸ್ತಾಪಿಸಲಬೇಕಾದ ವಿಷಯಗಳು ಮತ್ತು ಅಭಿಪ್ರಾಯಗಳ ಬಗ್ಗೆ ಒಮ್ಮತವನ್ನು ಮೂಡಿಸಲು ಈ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.
ನವೆಂಬರ್ 29 ರಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಪಕ್ಷವು ಪ್ರಸ್ತಾಪಿಸುವ ವಿಷಯಗಳ ಕುರಿತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಲಾಗಿದೆ. ಅಧಿವೇಶನದಲ್ಲಿ ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ದತೆ ನಡೆಸಿವೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಚಳಿಗಾಲದ ಅಧಿವೇಶನದಲ್ಲಿ ನಾವು ಹಣದುಬ್ಬರದ ವಿಷಯವನ್ನು ಪ್ರಸ್ತಾಪವಿಸುತ್ತೇವೆ. ಈ ಸಂಬಂಧ ಕಾರ್ಯತಂತ್ರವನ್ನು ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಶಾಸನ ಸೇರಿದಂತೆ 26 ಹೊಸ ಮಸೂದೆಗಳು ಮತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.


