ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಮತ್ತು ನೀವು ಬದಲಾವಣೆಯನ್ನು ನೋಡುತ್ತೀರಿ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಶುಕ್ರವಾರ ಬಾಂಬ್ ಸಿಡಿಸಿದ್ದಾರೆ.
ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಸರ್ಕಾರ ರಚಿಸಲು ಮತ್ತು ಸರ್ಕಾರವನ್ನು ಪತಗೊಳಿಸಲು ಕೆಲವು ವಿಷಯಗಳನ್ನು ರಹಸ್ಯವಾಗಿಡಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮಹಾರಾಷ್ಟ್ರ ಬದಲಾವಣೆಯನ್ನು ಕಾಣಲಿದೆ. ಇದು ಮಾರ್ಚ್ ನಲ್ಲಿ ನಡೆಯಲಿದೆ. ಈ ಬದಲಾವಣೆಯ ತಂತ್ರಗಳನ್ನು ರಹಸ್ಯವಾಗಿಡಬೇಕು. ಅವುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಎಲ್ಲಾ ವಿವರಗಳು ಹೊರಬಂದರೆ ಉನ್ನತ ನಾಯಕತ್ವಕ್ಕೆ ಸರಿ ಹೋಗುವುದಿಲ್ಲ. ವಿಷಯ ಬಹಿರಂಗಗೊಂಡರೆ ರಾಜ್ಯದಲ್ಲಿ ಬದಲಾವಣೆ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ವಿವರಿಸಿದರು.
ಮುಖ್ಯಮಂತ್ರಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂತಹ ಸಮಯದಲ್ಲಿ ನಾನು ಅವರ ಹೆಸರನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಮಹಾರಾಷ್ಟ್ರ ಸಿಎಂ ವಿರುದ್ಧ ಮಾತನಾಡದಂತೆ ಪಕ್ಷದ ರಾಜ್ಯಾಧ್ಯಕ್ಷ ಚಂದ್ರಕಾಂತ ಪಾಟೀಲರ ಸ್ಪಷ್ಟ ಸೂಚನೆ ಇದೆ ಎಂದು ಸ್ಪಷ್ಡಪಡಿಸಿದರು.
ಕಾಂಗ್ರೆಸ್, ಎನ್.ಸಿಪಿ ಮತ್ತು ಶಿವಸೇನೆಯ ಮೂರು ಪಕ್ಷಗಳ ಒಕ್ಕೂಟ ಮಹಾ ವಿಕಾಸ್ ಅಘಾಡಿ ಸರ್ಕಾರ ವಿಫಲವಾಗಿದೆ. ಇದು ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿಲ್ಲ. ಇಂತಹ ಸನ್ನಿವೇಶದಲ್ಲಿ ಬಿಜೆಪಿಯ ಪುನರಾಗಮನ ಸ್ಪಷ್ಟವಾಗಿದೆ. ಸರ್ಕಾರ ಬೀಳುತ್ತದೆಯೇ ಅಥವಾ ಕೆಲವು ಪಕ್ಷಗಳು ಸಮ್ಮಿಶ್ರ ಸರ್ಕಾರದಿಂದ ಹೊರಬರುತ್ತವೆಯೇ ಎಂಬ ಬಗ್ಗೆ ಚರ್ಚಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಸ್ವಾತಂತ್ರ್ಯ ಗಳಿಸಿದ ವರ್ಷದ ಅಜ್ಞಾನಕ್ಕಾಗಿ ಉದ್ದವ್ ಠಾಕ್ರೆ ಅವರನ್ನು ಕಪಾಳಮೋಕ್ಷ ಮಾಡಬೇಕಾಗುತ್ತದೆ ಎಂಬ ಹೇಳಿಕೆ ನೀಡಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಕೇಂದ್ರ ಮಧ್ಯಮ ಉದ್ದಿಮೆಗಳ ಸಚಿವ ರಾಣೆ ಈ ಬಾಂಬ್ ಸಿಡಿಸಿದ್ದಾರೆ.