2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಲು ಸಮಾಜವಾದಿ ಪಕ್ಷದ ಜೊತೆ ಮಾತುಕತೆ ಆರಂಭಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಬುಧವಾರ ಹೇಳಿದೆ.
ಲಕ್ನೋದಲ್ಲಿ ಎಸ್.ಪಿ. ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ ಬಳಿಕ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಈ ಘೋಷಣೆ ಮಾಡಿದ್ದಾರೆಂಬುದನ್ನು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಾವು ಇಂದು ಮಾತುಕತೆ ಆರಂಭಿಸಿದ್ದೇವೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರ ದುರಾಡಳಿತದಲ್ಲಿ ನಲುಗುತ್ತಿರುವ ಉತ್ತರ ಪ್ರದೇಶದಲ್ಲಿಇ ಬಿಜೆಪಿಯನ್ನು ಸೋಲಿಸುವುದು ನಮ್ಮ ಆದ್ಯ ಗುರಿಯಾಗಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರು ಹಲವು ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ನಮ್ಮ ಇಂದಿನ ಸಭೆ ಕೂಡ ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಹೇಳಿದೆ.
ಎಎಪಿಯ ಉತ್ತರ ಪ್ರದೇಶ ಉಸ್ತುವಾರಿ ಸಿಂಗ್ ಪ್ರತಿಪಕ್ಷಗಳ ಒಗ್ಗಟ್ಟಿಗೆ ವೇದಿಕೆ ಹಾಕಿದ್ದಾರೆ. ಬಿಜೆಪಿಯನ್ನು ಸೋಲಿಸುವುದು ಎಲ್ಲ ಪ್ರತಿಪಕ್ಷಗಳ ಪ್ರಾಥಮಿಕ ಗುರಿಯಾಗಬೇಕು ಎಂದು ಅವರು ಹೇಳಿದ್ದಾರೆ.
ಎಸ್.ಪಿ ಮತ್ತು ಆರ್.ಎಲ್.ಡಿ ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರವೇ ಒಪ್ಪಂದವನ್ನು ಪ್ರಕಟಿಸಲಾಗುವುದು ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನವೆಂಬರ್ 28ರಂದು ಲಕ್ನೋದಲ್ಲಿ ಉದ್ಯೋಗ ಖಾತ್ರಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಅದೇ ದಿನ ಯುಪಿ ಶಿಕ್ಷಕರ ಅರ್ಹತಾ ಪರೀಕ್ಷೆ ಇರುವುದರಿಂದ ಸ್ಥಳೀಯ ಆಡಳಿತ ರೋಜ್ಗಾರ್ ಗ್ಯಾರಂಟಿ ರ್ಯಾಲಿಯನ್ನು ಮುಂದೂಡಿದೆ


