ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ 10 ಸಾವಿರ ರೂಪಾಯಿ ಕೊಡುವುದಾಗಿ ಘೋಷಿಸಿರುವಂತೆಯೇ ರೈತರ ಪ್ರತಿ ಎಕರೆಗೂ 10 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ವರ್ಷದಿಂದ ಅತಿವೃಷ್ಟಿ ಅನಾವೃಷ್ಟಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಭತ್ತ, ರಾಗಿ, ಕಾಫಿ, ಜೋಳ, ಅಡಿಕೆ, ಹತ್ತಿ ಹೀಗೆ ಎಲ್ಲಾ ಬೆಳೆಗಳೂ ಮಳೆಯಿಂದ ಕೊಳೆತುಹೋಗಿದೆ. ಆದರೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎಂದು ದೂರಿದರು.
ದೊಡ್ಡ ಪ್ರಮಾಣದಲ್ಲಿ ಬೆಳೆ ಕಳೆದುಕೊಂಡ ಬಗ್ಗೆ ಸರ್ಕಾರ ಸಮೀಕ್ಷೆಯನ್ನು ನಡೆಸಿಲ್ಲ. ರೈತರ ಗೋಳನ್ನು ಕೇಳಿಲ್ಲ. ಸಚಿವರು ಪ್ರವಾಸ ಮಾಡದೆ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದು ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂಬುದು ತೋರಿಸುತ್ತದೆ. ಅಧಿಕಾರಿಗಳು ಕೂಡ ಕಾಳಜಿ ತೋರಿಸುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆಳೆ ಹಾನಿಯ ಜೊತೆಗೆ ರೈತರು ಪೋಟೋವನ್ನು ತೆಗೆದು ಅಧಿಕಾರಿಗಳ ಗಮನ ಸೆಳೆದು ಪರಿಹಾರ ಕೊಡಿಸುವ ಜವಾಬ್ದಾರಿ ಹೊರಬೇಕು ಎಂದು ಸಲಹೆ ನೀಡಿದರು.
ರೈತರು ದೇಶದಲ್ಲಿ ಅನಾಥವಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಘೋಷಿಸಿದ ಪರಿಹಾರವನ್ನು ಕೊಟ್ಟಿಲ್ಲ. ಬೆಳೆ ಹಾನಿಗೆ ಕೇವಲ 10 ಸಾವಿರ ರೂ ನೀಡುವ ಹೇಳಿಕೆಯಿಂದ ರೈತರು ಅರ್ಜಿಯನ್ನೇ ಹಾಕಲಿಲ್ಲ. ಸರ್ಕಾರದ ಭರವಸೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಘೋಷಣೆಯಾಗಿದ್ದರೂ ರೈತರಿಗ ಸಿಕ್ಕಿಲ್ಲ. ಸರ್ಕಾರ ಕೇವಲ ಬಾಯಿ ಮಾತುಗಳನ್ನು ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದುವರೆಗೆ ಸರ್ಕಾರ ರೈತರು ಮತ್ತು ಕೋವಿಡ್ ತೊಂದರೆ ಅನುಭವಿಸಿದವರಿಗೆ ಎಷ್ಟು ಪರಿಹಾರ ನೀಡಿದೆ ಎಂಬುದನ್ನು ಜಾಹಿರಾತು ನೀಡಲಿ. ಮನೆಗಳಿಗೆ ಹಾನಿಯಾಗಿದೆ. ಬೆಳೆಗಳಿಗೆ ಹಾನಿಯಾಗಿದೆ. ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ವಿಮೆ ಕಟ್ಟಿಸಿಕೊಂಡ ಕಂಪನಿಗಳು ರೈತರ ನೆರವಿಗೆ ಬಂದಿಲ್ಲ. ಆ ಕಂಪನಿಗಳಿಂದ ಬೆಳೆ ವಿಮೆ ಪರಿಹಾರ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವ್ಯಾಪಕ ಮಳೆಯಿಂದ ಅಪಾರ ಹಾನಿ ಉಂಟಾಗಿದ್ದರೂ ಕೃಷಿ, ತೋಟಗಾರಿಕೆ ಮತ್ತು ಸಹಕಾರ ಸಚಿವರು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದಿಲ್ಲ. ನಗರದ ಜನಕ್ಕೆ 10 ಸಾವಿರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ಅನ್ನದಾತರ ನೆರವಿಗೂ ಮುಖ್ಯಮಂತ್ರಿಗಳು ಮುಂದಾಗಬೇಕು. ಪ್ರತಿ ಎಕರೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಫಸಲ್ ಬಿಮಾ ಯೋಜನೆ ಇದೆ. ಅದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಫಸಲ್ ಬಿಮಾ ಯೋಜನೆ ಬಗ್ಗೆ ಪ್ರಚಾರ ಮಾತ್ರ ಜೋರಾಗಿದೆ. ಎನ್.ಡಿ.ಆರ್.ಎಫ್ ನಡಿ ರೈತರಿಗೆ ಪರಿಹಾರ ನಿಗದಿ ಮಾಡಿದ್ದರೂ ಅದು ಹಳೆಯದು. ಈಗ ಬೆಲೆಗಳು ಗಗನಕ್ಕೆ ಏರಿವೆ. ಆದ್ದರಿಂದ ಪರಿಹಾರ ಪರಿಷ್ಕರಣೆ ಆಗಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಕೃಷ್ಣ ಬೈರೇಗೌಡ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.


