ಸ್ಥಳೀಯ ಮುಖಂಡರ ಜತೆ ಚರ್ಚಿಸಿ, ಪಕ್ಷಕ್ಕೆ ದುಡಿದವರನ್ನು ಗಮನದಲ್ಲಿಟ್ಟುಕೊಂಡು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ಇದು ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆ. ಮತದಾರರು, ಸ್ಥಳೀಯ ನಾಯಕರ ಅಪೇಕ್ಷೆಯಂತೆ ಕೆಲವರು ಹೊಸಬರಿಗೂ ಅವಕಾಶ ನೀಡಲಾಗಿದೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲೂ ಈ ಪ್ರತೀತಿ ಉಂಟು. ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷಗಳೂ ಆಯಾ ಸಂದರ್ಭಕ್ಕೆ ತಕ್ಕಂತೆ ಹೊಸಬರಿಗೆ ಅವಕಾಶ ನೀಡಿವೆ. ಅದೇ ರೀತಿ ಕೆಲ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಪರಿಗಣಿಸಲಾಗಿದೆ. ಒಳ್ಳೊಳ್ಳೆ ಕಾರ್ಯಕರ್ತರು ಇದ್ದಾರೆ. ಎಸ್.ಆರ್. ಪಾಟೀಲ್ ಅವರನ್ನು ಕಡೆಗಣಿಸಲಾಗಿದೆ ಎಂಬುದು ಸರಿಯಲ್ಲ. ವರಿಷ್ಠರು, ರಾಜ್ಯ ಮುಖಂಡರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ. ಪಾಟೀಲರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಬೇರೆ ಅಜೆಂಡಾ ಇದೆ ಎಂದು ತಿಳಿಸಿದರು.
ಸ್ಥಳೀಯ ಶಾಸಕರ ವಿರೋಧದ ನಡುವೆಯೂ ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬುದೂ ಸರಿಯಲ್ಲ. ಕೆಲವರು ಅವರ ಅಭಿಪ್ರಾಯ ಹೇಳಿರಬಹುದು. ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ ಕ್ರೋಢೀಕರಿಸಿ ಅವರಿಗೆ ಟಿಕೆಟ್ ನೀಡಲಾಗಿದೆ. ಕೊಂಡಯ್ಯ ಅವರು ಹಿರಿಯ ನಾಯಕರು. ಸೋನಿಯಾ ಗಾಂಧಿ ಅವರಿಗಾಗಿ ಸಂಸತ್ ಸ್ಥಾನ ತ್ಯಾಗ ಮಾಡಿದವರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.