ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರ ಪಿನಾಕಿನಿ ನದಿ ತುಂಬಿ ಹರಿಯುತ್ತಿದೆ. ಪಾವಗಡ ತಾಲ್ಲೂಕು ನಾಗಲ ಮಡಿಕೆ ಸಮೀಪವಿರುವ ಈ ನದಿ 25 ವರ್ಷಗಳ ನಂತರ ಮೊದಲ ಬಾರಿಗೆ ಜೀವತುಂಬಿ ಹರಿದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಇಲ್ಲಿ ನಿರ್ಮಿಸಿರುವ ಮೇಲ್ಸೇತುವೆಯ ಮೇಲೆ ನೀರು ಹರಿದುಹೋಗುತ್ತಿದೆ. ಹಲವು ವರ್ಷಗಳ ನಂತರ ತುಂಬಿ ಹರಿಯುತ್ತಿರುವ ಉತ್ತರ ಪಿನಾಕಿನಿ ನದಿ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಗ್ರಾಮಸ್ಥರು ಬಂದು ವೀಕ್ಷಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರು ಜಿಲ್ಲಾ ವಿದ್ಯಾರ್ಥಿ ಮುಖಂಡ ಈ.ಶಿವಣ್ಣ ನವೆಂಬರ್ 22ರಂದು ತನ್ನ ಊರಾದ ವೆಂಕಟಾಪುರಕ್ಕೆ ಭೇಟಿ ನೀಡಿ ಉತ್ತರ ಪಿನಾಕಿನಿ ನದಿ ತುಂಬಿ ಹರಿಯುವ ಮಾಹಿತಿಯನ್ನು ಪಡೆದು ತನ್ನ ಸ್ನೇಹಿತರೊಂದಿಗೆ ನದಿ ವೀಕ್ಷಿಸಲು ಹೋಗಿದ್ದು, “ನದಿ ತುಂಬಿ ಹರಿಯುತ್ತಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಸುತ್ತಮುತ್ತಲಿನ ಬೋರ್ ವೆಲ್ ಗಳು ಸೇಪು ಆಗಲಿವೆ. ನಾಲ್ಕೈದು ವರ್ಷಗಳು ಈ ಭಾಗದಲ್ಲಿ ನೀರಾವರಿ ಬೆಳೆಗಳನ್ನು ಬೆಳೆದುಕೊಳ್ಳಲು ಸಹಕಾರಿಯಾಗಲಿದೆ” ಎಂದು ಹೇಳಿದರು.
ಉತ್ತರ ಪಿನಾಕಿನಿ ನದಿ ಅಮರಾಪುರ, ಮಡಕಶಿರಾ ವೆಂಕಟಾಪುರ, ನಾಗಲಮಡಿಕೆ ಮೂಲಕ ಪೆರೂರು ಜಲಾಶಯ ಸೇರುತ್ತದೆ. ನದಿ ಇನ್ನೂ ಹಲವು ದಿನಗಳು ಹರಿಯಲಿದೆ. ಇದು ನಾಗಲಮಡಿಕೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂತಸಕ್ಕೆ ಕಾರಣವಾಗಿದೆ.
ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಿದ್ದು ಕುಡಿಯುವ ನೀರನ್ನು ಪಾವಗಡ ಪಟ್ಟಣಕ್ಕೆ ಪೂರೈಕೆ ಮಾಡಲು ಅನುಕೂಲವಾಗಿದೆ. ಪರಗಿ ಕೆರೆ ತುಂಬಿದರೆ ಮೂರು ವರ್ಷ ನೀರಿನ ಸಮಸ್ಯೆ ಇರುವುದಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯ.