ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆದು ರಾಜ್ಯಕ್ಕೆ ಒಂದೇ ರಾಜಧಾನಿ ಅಮರಾವತಿ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಈ ಸಂಬಂಧ ವಿಚಾರಣೆ ಸಂದರ್ಭದಲ್ಲಿ ಅಡ್ವೋಕೇಟ್ ಜನರಲ್ ಎಸ್.ಶ್ರೀರಾಮ್ ಮುಖ್ಯಮಂತ್ರಿಗಳ ನಿರ್ಧಾರವನ್ನ ಹೈಕೋರ್ಟ್ ಗೆ ತಿಳಿಸಿದರು. ‘ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆದು ಹೈಕೋರ್ಟ್ ಗೆ ನಿರ್ಧಾರ ತಿಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದರು.
ವೈಎಸ್.ಆರ್.ಪಿ ಸರ್ಕಾರವು ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಪ್ರಸ್ತಾಪಿಸಿತ್ತು. ಅಮರಾವತಿಗೆ ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂಗೆ ಕಾರ್ಯಾಂಗ ಮತ್ತು ಕರ್ನೂಲ್ ಗೆ ನ್ಯಾಯಾಂಗ ರಾಜಧಾನಿ ಎಂದು ಆಂಧ್ರ ಸರ್ಕಾರ ತಿಳಿಸಿತ್ತು.
ಈಗ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮೂರು ರಾಜಧಾನಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಮುಂದಿನ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಮೂರು ರಾಜಧಾನಿ ಪ್ರಸ್ತಾವನೆಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.