‘ಋಷಿಮೂಲ, ಜಲಮೂಲ ಹುಡುಕಬಾರದು’ ಎಂಬ ಮಾತೊಂದಿದೆ. ಅದನ್ನು ಹುಡುಕಹೊರಟಾಗ ಹುಟ್ಟುವ ಸ್ಥಳದ ವಾಸ್ತವ ಸಂಗತಿ ನಮಗೆ ಪರಿಚಯವಾಗುತ್ತದೆ ಎಂಬ ಕಾರಣಕ್ಕೇ ಅದನ್ನು ಮುಚ್ಚಿಡುವ ಪ್ರಯತ್ನ ಇಂದಿಗೂ ಮುಂದುವರೆದಿದೆ. ಅಂದರೆ ಶ್ರೇಷ್ಠತೆಯನ್ನು ಕಾಪಿಟ್ಟುಕೊಳ್ಳುವುದು ಹೀಗೆ ಹೇಳುವುದರ ಹಿಂದಿನ ಉದ್ದೇಶವೆಂಬುದು ಮನವರಿಕೆಯಾಗುತ್ತದೆ. ಮನುಷ್ಯ ಪ್ರಯತ್ನ ಹುಟ್ಟಿನ ಮೂಲವೇನೆಂಬುದನ್ನು ಕಂಡುಕೊಂಡಿದೆ. ಆದರೂ ಆ ಸತ್ಯಸಂಗತಿ ಜನರಿಗೆ ತಲುಪದಂತೆ ನೋಡಿಕೊಳ್ಳಲಾಗಿದೆ. ಹಾಗೆ ನೋಡಿಕೊಂಡಾಗ ಮಾತ್ರವೇ ಶ್ರೇಣೀಕೃತ ವ್ಯವಸ್ಥೆ ಸುಗಮವಾಗಿ ಮುಂದುವರೆಯಲು ಸಾಧ್ಯ ಮತ್ತು ಮೇಲ್ಜಾತಿಗಳು ಸಮಾಜದಲ್ಲಿ ಇತರೆ ಸಮುದಾಯಗಳನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳಲು ಸಾಧ್ಯವೆಂಬುದನ್ನು ಕಂಡುಕೊಂಡಿವೆ.
‘ಅಕ್ಕಿಯೊಳಗೆ ಅನ್ನವನು ಮೊದಲಾರು ಕಂಡವರು? ಅಕ್ಕರದ ಬರಹಕ್ಕೆ ಮೊದಲಿಗನಾರು?” ಎಂದು ಕೇಳುವ ಡಿವಿಜಿ ಕುಲದ ಮೂಲ ಪ್ರಶ್ನಿಸುವುದಿಲ್ಲ. ಕುಲಕ್ಕೆ ಮೊದಲಿಗನಾರು ಎಂದು ಕೇಳುವುದಿಲ್ಲ. ಅದು 20ನೇ ಶತಮಾನದಲ್ಲಿ. ಯಾಕೆಂದರೆ ಅವರದ್ದು ಬ್ರಾಹ್ಮಣ್ಯ ರಕ್ಷಣೆಯ ತಂತ್ರಗಾರಿಕೆ. ಆದರೆ 12ನೇ ಶತಮಾನದ ವಚನಕಾರರು ಮತ್ತು 16ನೇ ಶತಮಾನದ ಕನಕದಾಸರು ಜಾತಿ ಮೂಲದ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಕುಲ ಕುಲವೆಂದು ಹೊಡೆದಾಡದಿರಿ, ಆತ್ಮ ಯಾವ ಕುಲ, ಜೀವ ಯಾವ ಕುಲ, ಕುಲದ ನೆಲೆಯ ಏನಾದರು ಬಲ್ಲಿರಾ ಬಲ್ಲಿರಾ? ಎಂದು ಪ್ರಶ್ನಿಸುತ್ತಾರೆ. ಅಕ್ಕಿಯಲ್ಲಿ ಅನ್ನವನ್ನು ಶೋಧಿಸಿದವರು ಯಾರು? ಅಕ್ಷರದ ಬರಹವನ್ನು ಕಂಡವರು ಯಾರು? ಎಂಬುದನ್ನು ಹೇಗೆ ಕಂಡು ಹಿಡಿಯಲು ಸಾಧ್ಯವಿಲ್ಲವೋ ಹಾಗೆಯೇ ಕುಲದ ಮೂಲವನ್ನೂ ಕಂಡುಹಿಡಿಯಲು ಸಾಧ್ಯವಿಲ್ಲ ಎಂಬ ಸತ್ಯ ಸಂಗತಿಯನ್ನು ಜ್ಞಾನಿಗಳು ಬಹುಹಿಂದೆಯೇ ಹೇಳಿದರು.
ಇಂದಿಗೂ ನಡೆಯುವ ಸಭೆ ಸಮಾರಂಭಗಳಲ್ಲಿ ಪುರಂದರ ದಾಸರುಮತ್ತು ಕೇವಲ ಬ್ರಾಹ್ಮಣ ಕೀರ್ತನಕಾರರ ಕೀರ್ತನೆಗಳನ್ನು ಹಾಡುವುದಕ್ಕೆ ಹೆಚ್ಚಿನ ಮಹತ್ವ ಸಿಗುತ್ತಾ ಬರುತ್ತಿರುವುದನ್ನು ಕಾಣಬಹುದಾಗಿದೆ. ಕೀರ್ತನೆ ಹಾಡುವವರು ಮೇಲ್ಜಾತಿಯ ಬ್ರಾಹ್ಮಣ ಮತ್ತು ವೈಶ್ಯ ಮಹಿಳೆಯರು. ಇದಕ್ಕೆ ಕಾರಣ ಬ್ರಾಹ್ಮಣರಿಂದ ಸಂಗೀತ ಕಲಿತಿರುವ ಶೂದ್ರ ಮಹಿಳೆಯರು ಮತ್ತು ಬ್ರಾಹ್ಮಣ, ವೈಶ್ಯ ಮಹಿಳೆಯರ ಹಿನ್ನೆಲೆ ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಕನಕದಾಸರ ಕೀರ್ತನೆ ಹಾಡುವವರು ಸಂಖ್ಯೆ ಬಹುಕಡಿಮೆ. ಕನಕದಾಸರ ಕೀರ್ತನೆ ಹಾಡಿದರೂ ಅದು ಕೇವಲ ಭಕ್ತಿಗೆ ಸಂಬಂಧಿಸಿದ್ದಾಗಿರುತ್ತದೆ. ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಕೀರ್ತನೆಯ ಆಯ್ಕೆಗೆ ಸಂಗೀತ ಕಾರ್ಯಕ್ರಮದಲ್ಲಿ ಅವಕಾಶ ಇರುವುದಿಲ್ಲ.
ಕನಕದಾಸ ಪ್ರಸಿದ್ದಿಗೆ ಬಂದಿದ್ದು ಉಡುಪಿಯ ಕೃಷ್ಣನಿಂದ. ಉಡುಪಿಯ ಕೃಷ್ಣನ ದರ್ಶನಕ್ಕೆ ಕನಕದಾಸ ಬಾರದೇ ಹೋಗಿದ್ದರೆ, ಅಲ್ಲಿ ಕನಕದಾಸರಿಗೆ ಅವಮಾನವಾಗದೇ ಇದ್ದರೆ ಆತನ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬುದನ್ನು ಮರೆಯುವಂತಿಲ್ಲ. ಉಡುಪಿಯ ಕೃಷ್ಣ ದೇವಾಲಯದ ಹಿಂಬಾಗಿಲಿನ ಕಿಂಡಿಯೊಳಗಿನಿಂದ ಕನಕದಾಸರಿಗೆ ದರ್ಶನ ನೀಡಿದ ಎಂಬ ನಂಬಿಕೆ ಜನರಲ್ಲಿದೆ. ಇದು ಸತ್ಯವೋ ಸುಳ್ಳೋ, ಆದರೆ ಇದಕ್ಕೆ ಬೇರೆಯದೇ ಅರ್ಥವಿರಬಹುದು. ಅಂದರೆ ಉಡುಪಿಯ ಕೃಷ್ಣ ದೇಗುಲದಲ್ಲಿ ನಡೆದ ಅವಮಾನಕರ ಘಟನೆ ಮಾತ್ರ ಸತ್ಯ. ಈ ಕಾರಣಕ್ಕಾಗಿಯೇ ದಾಸ ಪರಂಪರೆಯಲ್ಲಿ ಗುರುತಿಸಿಕೊಂಡು ಬಂದರೂ ಕನಕದಾಸ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಪ್ರಶ್ನಿಸಿದರು. ‘ರಾಗಿ ಮತ್ತು ವ್ರೀಹಿ’ಯಲ್ಲಿ ರಾಗಿಯನ್ನೇ ಆಯ್ಕೆ ಮಾಡಿಕೊಂಡರು. ಅಂದರೆ ಕಪ್ಪು ಮತ್ತು ಬಿಳಿ’ಯದ್ದರಲ್ಲಿ ಯಾವುದು ಶ್ರೇಷ್ಟ ಎಂಬ ಪ್ರಶ್ನೆ ಎದುರಾದಾಗ ಕಪ್ಪು ಬಣ್ಣದ ರಾಗಿಯ ಬೆಂಬಲಕ್ಕೆ ನಿಲ್ಲುವ ಮತ್ತು ಅದರ ಮಹತ್ವ ವಿವರಿಸಿ ಕಪ್ಪುರಾಗಿ ಗುಣ, ಆರೋಗ್ಯದ ಗುಟ್ಟನ್ನು ಕಟ್ಟಿಕೊಡುವುದನ್ನು ರಾಮಧಾನ್ಯ ಚರಿತೆಯಲ್ಲಿ ಕಾಣಬಹುದು.
“ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ, ನಿಗಮಾಗಮ ಪುರಾಣಗಳನ್ನೋದಿ ತಿಳಿದು, ಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವ, ಯೋಗ ಭ್ರಷ್ಟರೆಲ್ಲ” “ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆ, ಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆ, ಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥ, ಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ”
ಬ್ರಾಹ್ಮಣರ ಆಡಂಬರದ ಜೀವನ ಕ್ರಮ ಮತ್ತು ಅಲ್ಲಾ ಖುದಾ ಅರ್ಧವನ್ನು ತಿಳಿಯದೆ ಸುಳ್ಳನ್ನು ಬೊಗಳುವ ಕಳ್ಳರಿಗೆ ಸ್ವರ್ಗವೆಂಬುದು ಇನ್ನೆಲ್ಲಿ ಬ್ರಾಹ್ಮಣ್ಯವನ್ನು ಖಂಡಿಸುವ ಕನಕದಾಸರನ್ನು ಯಾವ ಕಾರಣಕ್ಕೆ ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ ಎಂಬುದನ್ನು ಯುವಪೀಲಿಗೆ ಅರ್ಥಮಾಡಿಕೊಳ್ಳಬೇಕಾಗಿದೆ. ಇಂದಿಗೂ ಜಾತಿಯ ಬೇರುಗಳು ಆಳವಾಗಿ ಬೇರೂರಲು ಕಾರಣ ಜಾತ್ಯತೀತ ನೆಲೆಗಳನ್ನು ಕಂಡರಿಸುವ ಕ್ರಮವನ್ನು ಬಿಟ್ಟು ಅದೇ ಜಿಡ್ಡುಗಟ್ಟಿದ ತೋರುಂಬ ಭಕ್ತಿಯನ್ನು ಮಾತ್ರ ಹೇಳುತ್ತಿರುವುದರಿಂದ ಸಮಾಜದಲ್ಲಿ ಜಾತಿ ವ್ಯವಸ್ಥೆ ಭದ್ರಗೊಳ್ಳುತ್ತಿದೆ. ಇದೇ ಕಾರಣಕ್ಕೆ ಬ್ರಾಹ್ಮಣ್ಯವೆಂಬ ಮನಸ್ಸು ಕನಕದಾಸರನ್ನು ನಿರ್ಲಕ್ಷ್ಯಕ್ಕೆ ಒಳಗುಮಾಡಿದೆ.
ಹಾಗೆಯೇ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದ ತೆಲುಗಿನ ವೇಮನ, ತಮಿಳಿನ ತಿರುವಳ್ಳವರ್, ಜ್ಯೋತಿ ಬಾಪುಲೆ ದಂಪತಿ, ಕುದ್ಮಲ್ ರಂಗರಾವ್, ಆಧುನಿಕ ಸಂದರ್ಭದ ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದವರ ವಿಚಾರಗಳನ್ನು ಪ್ರಚುರಪಡಿಸುತ್ತ ಬರುವವರನ್ನು ಮುಖ್ಯವಾಹಿನಿ ಮಾಧ್ಯಮಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತ ಬರುತ್ತಾ ಜಾತಿ ತಾರತಮ್ಯವನ್ನು ಮತ್ತಷ್ಟು ಬಲಪಡಿಸುವಂತಹ ಕೆಲಸವನ್ನು ಮುಂದುವರೆಸಿಕೊಂಡು ಬರುತ್ತಿವೆ. ಇಂತಹ ಒತ್ತಿನಲ್ಲಿ ಜಾತಿ ತಾರತಮ್ಯ ವಿರೋಧಿ ಚಿಂತನೆಗಳು ಮುಪ್ಪುರಿಗೊಂಡು ಜನರ ಮನದಾಳದಲ್ಲಿ ಹರಿಸುವಂತಹ ಕೆಲಸ ಮಾಡಬೇಕಾಗಿದೆ.
ಕೆ.ಈ.ಸಿದ್ದಯ್ಯ