ರಾಜ್ಯದ ಎಲ್ಲಾ ಜಿಲ್ಲೆಗಳ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಫಲಿತಾಂಶ ನವೆಂಬರ್ 24ರಂದು ಹೊರಬೀಳಲಿದೆ.
ರಾಜ್ಯದ 30 ಜಿಲ್ಲೆಗಳಲ್ಲಿ ಚಲಾವಣೆಯಾಗಿ ಎಣಿಕೆಗೊಂಡಿರುವ ಮತಗಳ ಅಂಕಿಅಂಶಗಳನ್ನು ಪಡೆಯಲಾಗಿದ್ದು ನವೆಂಬರ್ 24ರಂದು ಮಧ್ಯಾಹ್ನದ ವೇಳೆಗೆ ರಾಜ್ಯಾಧ್ಯಕ್ಷರು ಯಾರೆಂಬುದ ಗೊತ್ತಾಗಲಿದೆ.
ಹೊರನಾಡು ಕನ್ನಡಿಗರು, ಹೊರ ದೇಶಗಳ ಕನ್ನಡಿಗರು ಅಂಚೆ ಮೂಲಕ ಮತದಾನ ಮಾಡಿದ್ದು, ಆ ಮತಪತ್ರಗಳು ಬೆಂಗಳೂರಿಗೆ ಬರಬೇಕಾಗಿದೆ. ಅಂಚೆ ಮತಗಳು ಬಂದ ನಂತರ ಎಣಿಕೆ ಆರಂಭವಾಗಲಿದೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 12ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರಲ್ಲಿ ಪ್ರಮುಖವಾಗಿ ಶೇಖರ್ ಗೌಡ ಪಾಟೀಲ್, ರಾಮೇಗೌಡ, ಮಹೇಶ್ ಜೋಶಿ, ಚನ್ನೇಗೌಡ ಅವರ ಹೆಸರುಗಳು ಹೆಚ್ಚು ಪ್ರಚಲಿತದಲ್ಲಿವೆ.
ಎಲ್ಲಾ ಜಿಲ್ಲೆಗಳಲ್ಲಿ ಶೇಖರ್ ಗೌಡ ಪಾಟೀಲ್, ರಾಮೇಗೌಡ, ಚನ್ನೇಗೌಡ ಮತ್ತು ಮಹೇಶ್ ಜೋಶಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.