ರೈತರು, ಮಹಿಳೆಯರು, ಕಾರ್ಮಿಕರು, ಯುವಜನರು ಒಟ್ಟಿಗೆ ಸೇರಿ ಹೋರಾಟಕ್ಕೆ ಇಳಿದರೆ ಅವರನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಜನಶಕ್ತಿಯ ಮುಂದೆ ಯಾವುದೇ ತಂತ್ರಗಾರಿಕೆ ನಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತುಮಕೂರಿನಲ್ನಲಿ ಮಾನತಾಡಿದ ಅವರು, ರೈತರ ಹೋರಾಟ ದೇಶದ ಅತಿ ದೊಡ್ಡ ರಾಜಕೀಯ ಪಕ್ಷವೊಂದು ತನ್ನ ತಪ್ಪು ನಿರ್ಧಾರದಿಂದ ಯುಟರ್ನ್ ಹೊಡೆಯುವಂತೆ ಮಾಡಿದೆ. ಇದು ಜನಶಕ್ತಿಗೆ ಇರುವ ತಾಕತ್ತು ಎಂದು ತಿಳಿಸಿದರು.
ರೈತರು ತಮ್ಮ ಬದುಕು ಉಳಿಸಿಕೊಳ್ಳಲು ಒಂದು ವರ್ಷದಿಂದ ವ್ಯವಸಾಯ, ದುಡಿಮೆ, ವ್ಯಾಪಾರ ಎಲ್ಲ ಬಿಟ್ಟು, ಮಳೆ, ಚಳಿ, ಗಾಳಿ ಲಕ್ಕಿಸದೆ ಬೀದಿಗೆ ಇಳಿದು ಹೋರಾಟ ಮಾಡಿದರು. 700 ರೈತರು ಹುತಾತ್ಮರಾದರು. ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ತಲಾ ಐದು ಎಕರೆ ಭೂಮಿ ನೀಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟ ಸರ್ಕಾರ 2022ಕ್ಕೆ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿತ್ತು. ಆದರೆ ರೈತರ ಆದಾಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಸಗೊಬ್ಬರ, ಬಿತ್ತನೆ ಬೀಜ, ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿ ಜನತೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ದೇಶದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸದಸ್ಯ ಅಭಿಯಾನದಲ್ಲಿ ಬೋಗಸ್ ಬೇಡ, ನೈಜ ಸದಸ್ಯತ್ವಕ್ಕೆ ಅದ್ಯತೆ ನೀಡಿ, ಗ್ರಾಮ ಗ್ರಾಮಕ್ಕೆ ಮುಖಂಡರು ಹೋಗಬೇಕು, ಸದಸ್ಯರನ್ನು ನೊಂದಾಯಿಸಬೇಕು ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಿಜೆಪಿಗರು ಕಾಂಗ್ರೆಸ್ ಬಗ್ಗೆ ಕೀಳು ಮಟ್ಟದಲ್ಲಿ ಮಾತಾಡುತ್ತಿದ್ದು, ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದಾರೆ, ಕಾಂಗ್ರೆಸ್ ಆಡಳಿತದಲ್ಲಿ ಅಣೆಕಟ್ಟು ನಿರ್ಮಾಣ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಹಸಿರು ಕ್ರಾಂತಿ, ಇಸ್ರೋ ಸ್ಥಾಪನೆ, ಚಂದ್ರಯಾನ ಆರಂಭಿಸಿದ್ದು ಬಿಜೆಪಿಯಲ್ಲ. ಕಾಂಗ್ರೆಸ್ ಅಡಿಪಾಯದ ಮೇಲೆ ಆಡಳಿತ ನಡೆಸುತ್ತಿದ್ದೇವೆ ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದಾರೆ ಎಂದು ಟೀಕಿಸಿದರು.